

ಬಳ್ಳಾರಿ : ಉತ್ತಮ ಸಮತೋಲಿತ ಆಹಾರ ಮತ್ತು ವ್ಯಾಯಾಮ, ಯೋಗ ಮೂಲಕ ಮೆದುಳಿನ ಆರೋಗ್ಯವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನಿ ಹೇಳಿದರು.
ನಗರದ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ, ಮೆದುಳಿನ ಆರೋಗ್ಯ ಚಿಕಿತ್ಸಾ ಕೇಂದ್ರ ಸಹಯೋಗದೊಂದಿಗೆ ಸೋಮವಾರ ನಡೆದ ಮೆದುಳಿನ ಆರೋಗ್ಯ ಚಿಕಿತ್ಸಾ ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ಮೆದುಳು ದಿನಾಚರಣೆ ಕಾರ್ಯಕ್ರಮ ಮತ್ತು ನೂತನ ಮೆದುಳಿನ ಆರೋಗ್ಯ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಮೆದುಳಿನ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು. ಚಿಂತೆ, ಖಿನ್ನತೆ, ಒತ್ತಡ ನಿರ್ವಹಣೆಯತ್ತ ನಾವು ಹೆಚ್ಚು ಗಮನ ನೀಡಬೇಕು. ಮಾನಸಿಕ ಸ್ವಾಸ್ಥ ಕಾಪಾಡಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ದಾರಿ ಮಾಡಿಕೊಡಬೇಕು. ಮೆದುಳಿನ ಆರೋಗ್ಯ ಮತ್ತು ಅಸ್ವಸ್ಥತೆಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿಯನ್ನು ನೀಡಬೇಕು ಎಂದರು.
ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ.ಕೆ.ಜಿ. ವೀರೇಂದ್ರ ಕುಮಾರ ಮಾತನಾಡಿ, ಮೆದುಳಿನ ಸಮಸ್ಯೆ ಹೊಂದಿರುವವರಿಗೆ ತಜ್ಞರ ಆರೈಕೆ, ಚಿಕಿತ್ಸೆ ವ್ಯವಸ್ಥೆಯನ್ನು ಕಲ್ಪಿಸಲು ಜಿಲ್ಲಾಸ್ಪತ್ರೆಯಲ್ಲಿ ನೂತನವಾಗಿ ಮೆದುಳಿನ ಆರೋಗ್ಯ ಚಿಕಿತ್ಸಾ ಕೇಂದ್ರವು ಆರಂಭಗೊಂಡಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮೆದುಳಿನ ಸಮಸ್ಯೆಗಳನ್ನು ತಪ್ಪಿಸಬಹುದು, ಚಿಕಿತ್ಸೆ ನೀಡಬಹುದು ಹಾಗೂ ಇದರಿಂದ ಚೇತರಿಸಿಕೊಳ್ಳಬಹುದು. 40 ವರ್ಷ ಮೇಲ್ಪಟ್ಟವರು ಪ್ರತಿ ಆರು ತಿಂಗಳಿಗೊಮ್ಮೆ ತಪ್ಪದೇ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಪ್ರಮುಖರಾದ ಉಪಮುಖ್ಯಾಧಿಕಾರಿ ಡಾ.ಗುರುನಾಥ ಬಿ.ಚವ್ಹಾಣ, ವೈದ್ಯಾಧಿಕಾರಿಮೆದುಳು ಆರೋಗ್ಯ ಚಿಕಿತ್ಸಾ ಕೇಂದ್ರದ ನರರೋಗ ತಜ್ಞ ಡಾ.ಕಮಲ್ ಕುಮಾರ ಜೈನ್, ನೋಡಲ್ ಅಧಿಕಾರಿ ಡಾ.ರಾಕೇಶ್ ಇದ್ದರು.