

ಗೌಡಪ್ಪ ಬನ್ನೆ ಶಿಗ್ಗಾಂವಿ
ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸೂಕ್ತ ಮಾರುಕಟ್ಟೆ ಸಿಗದೇ ದರ ಕುಸಿತದ ಕಾರಣದಿಂದಾಗಿ ಮೆಣಸಿನಕಾಯಿ ಬೆಳೆಯನ್ನು ಬಹುತೇಕ ರೈತರು ಹೊಲದಲ್ಲಿಯೇ ನಾಶಪಡಿಸುತ್ತಿದ್ದಾರೆ.
ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಹಸಿಮೆಣಸಿಕಾಯಿ ಬೆಳೆಯುವ ಪ್ರದೇಶಗಳಲ್ಲಿ ಶಿಗ್ಗಾಂವಿ ತಾಲೂಕು ಮೊದಲ ಸ್ಥಾನದಲ್ಲಿದೆ. ಮುಂಗಾರಿನಲ್ಲಿ ಹತ್ತಿ, ಗೋವಿನಜೋಳ, ಶೇಂಗಾ ಪ್ರಮುಖ ಬೆಳೆಗಳಾದರೆ, ಹಿಂಗಾರಿನಲ್ಲಿ ಹಸಿಮೆಣಸಿನಕಾಯಿ ಮಾತ್ರ ಪ್ರಮುಖ ವಾಣಿಜ್ಯ ಬೆಳೆಯಾಗಿ ಗುರುತಿಸಿಕೊಂಡಿದೆ.
ಪ್ರಸ್ತುತ ವರ್ಷ 1200 ಎಕರೆಗಿಂತಲೂ ಅಧಿಕ ಪ್ರದೇಶದಲ್ಲಿ ಇದನ್ನು ಬೆಳೆಯಲಾಗಿದೆ. ಆದರೆ, ಲಾಕ್ಡೌನ್ ಹಿನ್ನೆಲೆಯಲ್ಲಿ ದರ ತೀವ್ರ ಕುಸಿತವಾಗಿರುವುದರಿಂದ ಈ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಕೆಲವರ ಫಸಲು ಜಮೀನಿನಲ್ಲಿಯೇ ಕೊಳೆಯುತ್ತಿದ್ದರೆ, ಇನ್ನು ಕೆಲವರ ಹೊಲದಲ್ಲಿ ಹಸಿಮೆಣಸಿನಕಾಯಿ ಹಣ್ಣಾಗಿ ಉದುರಿ ಬಿದ್ದಿದೆ.
ಹುಲಿಕಟ್ಟಿ, ಹೋತನಹಳ್ಳಿ, ಹಳೇಬಂಕಾಪುರ, ಶಿಡ್ಲಾಪುರ, ಮುಗಳಿಕಟ್ಟಿ, ಚಂದಾಪುರ, ನಿಡಗುಂದಿ, ಶಿಂಗಾಪುರ, ನೀರಲಕಟ್ಟಿ ಸೇರಿ ತಾಲೂಕಿನ ಬಹುತೇಕ ಗ್ರಾಮಗಳ ರೈತರು ಟ್ರಾ್ಯಕ್ಟರ್ನಿಂದ ಬೆಳೆ ನಾಶಪಡಿಸುತ್ತಿದ್ದಾರೆ. ಇನ್ನು ಕೆಲವರು ದನ, ಕುರಿಗಳನ್ನು ಹೊಲಕ್ಕೆ ಬಿಟ್ಟು ಬೆಳೆ ನಾಶಪಡಿಸುತ್ತಿದ್ದಾರೆ.
ಜನವರಿಯಿಂದಲೇ ಮೆಣಸಿನಕಾಯಿ ಬೆಳೆಯಲು ತಯಾರಿ ನಡೆಸಿ, ಹೊಲ ಹದಗೊಳಿಸಿ ಉತ್ತಮ ಬೆಳೆ ಬೆಳೆದಿರುವ ರೈತರಿಗೆ ಈಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕಳೆದ ವರ್ಷ ಪ್ರತಿ ಕ್ವಿಂಟಾಲ್ಗೆ ನಾಲ್ಕರಿಂದ ಆರು ಸಾವಿರ ರೂಪಾಯಿ ದರ ಇದ್ದ ಹಸಿ ಮೆಣಸಿನಕಾಯಿ ಬೆಲೆ ಈ ವರ್ಷ ಸಾವಿರ ರೂಪಾಯಿಯನ್ನೂ ದಾಟುತ್ತಿಲ್ಲ.
ಒಂದು ಕ್ವಿಂಟಾಲ್ ಹಸಿಮೆಣಸಿನಕಾಯಿ ಹರಿಯಲು ರೈತರು ಕನಿಷ್ಠ ಆರರಿಂದ ಏಳು ನೂರು ರೂಪಾಯಿ ಖರ್ಚಾಗುತ್ತದೆ. ಬೀಜ, ಗೊಬ್ಬರ, ನಿರ್ವಹಣೆ ವೆಚ್ಚ ಇರಲಿ, ಮೆಣಸಿನಕಾಯಿ ಕೃಷಿ ಕಾರ್ವಿುಕರಿಗೆ ಕೊಡಬೇಕಾಗಿರುವ ಕೂಲಿ ಹಣ ಸಹ ಮಾರಾಟದಿಂದ ಸಿಗುತ್ತಿಲ್ಲ. ಏಕೆಂದರೆ, ಸದ್ಯ ಇದರ ಬೆಲೆ ಕ್ವಿಂಟಾಲ್ಗೆ ಎಂಟು ನೂರರಿಂದ ಸಾವಿರ ರೂಪಾಯಿಗೆ ಇಳಿದಿದೆ.
ಪ್ರತಿ ದಿನವೂ ಇಲ್ಲಿಂದ ಮುಂಬೈ ಮಾರುಕಟ್ಟೆಗೆ ಟನ್ಗಟ್ಟಲೇ ಮೆಣಸಿನಕಾಯಿ ಒಯ್ಯಲಾಗುತ್ತಿತ್ತು. ಇದರಿಂದ ರೈತರು ಮತ್ತು ವ್ಯಾಪಾರಸ್ಥರು ಲಾಭದ ರುಚಿ ಕಂಡಿದ್ದರು. ಆದರೆ, ಲಾರಿ ಚಾಲಕರ ಮೂಲಕ ಕರೊನಾ ವೈರಸ್ ಮಹಾಮಾರಿ ಜಿಲ್ಲೆಗೆ ಒಕ್ಕರಿಸಿಕೊಂಡಾಗಿನಿಂದ ಮುಂಬೈಗೆ ಹೋಗಿ ಬರುವ ಎಲ್ಲ ತರಕಾರಿ ಲಾರಿಗಳನ್ನು ಜಿಲ್ಲಾಡಳಿತ ಸ್ಥಗಿತಗೊಳಿಸಿದೆ. ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ಈ ಮೆಣಸಿನಕಾಯಿ ಅತಿ ಹೆಚ್ಚು ಖಾರವಾಗಿರುವುದರಿಂದ ಸ್ಥಳೀಯ ಮಾರುಕಟ್ಟೆಗಳಲ್ಲಿಯೂ ಇದನ್ನು ಕೇಳುವವರೇ ಇಲ್ಲದಂತಾಗಿದೆ.
ತಾಲೂಕಿನಲ್ಲಿ ಹೂ ಬೆಳೆಗಾರರಿಗಿಂತ ಹಸಿಮೆಣಸಿನಕಾಯಿ ಬೆಳೆಗಾರರೇ ಹೆಚ್ಚಾಗಿದ್ದಾರೆ. ಇವರಿಗೆ ಸೂಕ್ತ ಪರಿಹಾರ ಘೊಷಿಸುವಲ್ಲಿ ಸರ್ಕಾರ ತಾರತಮ್ಯ ಮಾಡಿದೆ. ಹೂ ಬೆಳೆಗಾರರಿಗೆ 25000 ರೂಪಾಯಿ ಪರಿಹಾರ ಘೊಷಣೆ ಮಾಡಿರುವ ಸರ್ಕಾರವು ಮೆಣಸಿನಕಾಯಿ ಬೆಳೆಗಾರರಿಗೆ ಕೇವಲ 15000 ರೂ. ಘೊಷಿಸಿದೆ. ಕೂಡಲೆ ಸರ್ಕಾರ ಹಸಿಮೆಣಸಿನಕಾಯಿ ಬೆಳೆದ ರೈತರಿಗೆ ಕನಿಷ್ಠ ಹೆಕ್ಟೇರ್ಗೆ 50,000 ರೂ. ನೀಡಬೇಕು ಎಂದು ಸರ್ಕಾರ ಮತ್ತು ಸ್ಥಳೀಯ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತೇನೆ. | ಗಂಗಾಧರ ಗಡ್ಡೆ, ತಾಲೂಕು ಅನ್ನದಾತ ರೈತ ಹೋರಾಟ ಸಮಿತಿ ಶಿಗ್ಗಾಂವಿಮುಂಗಾರು ಬಿತ್ತನೆ ಮಾಡಲು ಜೂನ್ 15ರವರೆಗೂ ಅವಕಾಶವಿದೆ. ರೈತರು ಮುಂಗಾರು ಬಿತ್ತನೆ ಉದ್ದೇಶದಿಂದ ಹೊಲ ಹದಗೊಳಿಸಲು ಬೆಳೆ ನಾಶ ಮಾಡಲು ಅವಸರ ಮಾಡುವುದು ಬೇಡ. ಲಾಕ್ಡೌನ್ ಸಡಿಲಗೊಂಡಂತೆ ವ್ಯಾಪಾರ- ವಹಿವಾಟು ಹೆಚ್ಚಾಗುವ ನಿರೀಕ್ಷೆ ಇದೆ. ಇಷ್ಟು ದಿನ ಕಾಯ್ದವರು ಇನ್ನಷ್ಟು ದಿನ ಕಾಯುವುದು ಉತ್ತಮ. | ವಿಜಯಕುಮಾರ ಪೂಜಾರ, ಉಪನಿರ್ದೇಶಕರು ತೋಟಗಾರಿಕೆ ಇಲಾಖೆ