ಮೆಣಸಿನ ಗಿಡಗಳನ್ನು ಕಡಿದಿರುವ ಕಿಡಿಗೇಡಿಗಳು

23blrp1.
ಬೇಲೂರು ತಾಲೂಕಿನ ನಲಿಕೆ ಗ್ರಾಮದಲ್ಲಿ ಫಸಲಿಗೆ ಬಂದಿದ್ದ ಮೆಣಸಿನ ಗಿಡಗಳನ್ನು ಕಿಡಿಗೇಡಿಗಳು ಕಡಿದು ಹಾಕಿದ್ದರಿಂದ ಒಣಗಿರುವ ಬಳ್ಳಿಗಳು.
Published on

ಬೇಲೂರು: ತಾಲೂಕಿನ ನಲಿಕೆ ಗ್ರಾಮದಲ್ಲಿ ಫಸಲಿಗೆ ಬಂದಿದ್ದ ಮೆಣಸಿನ ಗಿಡಗಳ ಬಳ್ಳಿಗಳನ್ನು ಯಾರೋ ಕಿಡಿಗೇಡಿಗಳು ಕಡಿದು ಹಾಕಿದ್ದಾರೆ.

ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ತುಂಬು ದೇವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತೀಯ ನಲಿಕೆ ಗ್ರಾಮದ ಜೈಕುಮಾರ್ ಎಂಬುವರಿಗೆ ಸೇರಿದ ಕಾಫಿತೋಟದಲ್ಲಿ ಪ್ರಥಮವಾಗಿ ಫಸಲಿಗೆ ಬಂದಿದ್ದ 150ಕ್ಕೂ ಹೆಚ್ಚು ಮೆಣಸಿನ ಗಿಡದ ಬಳ್ಳಿಗಳನ್ನು ಕಿಡಿಗೇಡಿಗಳು ಶನಿವಾರ ಕಡಿದು ಹಾಕಿದ್ದಾರೆ.

ಆದರೆ ತೋಟದ ಮಾಲೀಕ ಜೈಕುಮಾರ್ ಎಂದಿನಂತೆ ತೋಟಕ್ಕೆ ಹೋದ ಸಂದರ್ಭ ಮರದಲ್ಲಿ ಹಬ್ಬಿದ್ದ ಮೆಣಸಿನ ಬಳ್ಳಿಗಳು ಒಣಗಿರುವುದು ಬೆಳಕಿಗೆ ಬಂದಿದೆ. ಗಿಡದ ಹತ್ತಿರ ಹೋಗಿ ಪರಿಶೀಲಿಸಿದಾಗ ಗಿಡಗಳನ್ನು ಬುಡದಲ್ಲೇ ಕಡಿದು ಹಾಕಿರುವುದನ್ನು ನೋಡಿ ಕುಗ್ಗಿ ಹೋಗಿದ್ದಾರೆ. ತಕ್ಷಣವೇ ಅಕ್ಕಪಕ್ಕದವರಿಗೆ ಕರೆದು ತೋರಿಸಿ ನಂತರ ಅರೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ತೋಟದ ಮಾಲೀಕ ಜೈಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಒಂದು ಕಡೆ ಆನೆ ಹಾವಳಿ, ಮತ್ತೊಂದೆಡೆ ಅತಿವೃಷ್ಟಿಯಿಂದ ಈ ಭಾಗದಲ್ಲಿ ಬೆಳೆಗಾರರು ಮತ್ತು ರೈತರು ಸಂಕಷ್ಟಕ್ಕೊಳಗಾಗಿದ್ದೇವೆ. ಇದರ ನಡುವೆ ಫಸಲಿಗೆ ಬಂದಿದ್ದ ಮೆಣಸಿನ ಬಳ್ಳಿಗಳನ್ನು ರಾತ್ರೋರಾತ್ರಿ ಯಾರೋ ಕತ್ತರಿಸಿದ್ದಾರೆ. ಇದರಿಂದ ಸಾಕಷ್ಟು ನಷ್ಟ ಸಂಭವಿಸಿದೆ. ಅಲ್ಲದೆ ಕಷ್ಟಪಟ್ಟು ಬೆಳೆಸಿದ ಬಳ್ಳಿಗಳನ್ನು ಕಡಿದಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಪೊಲೀಸರ ತನಿಖೆಯಿಂದ ಈ ಕೃತ್ಯವೆಸಗಿರುವವರು ಯಾರು ಎಂಬುದು ಬೆಳಕಿಗೆ ಬರಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net