

ಹಾಸನ: ಇಂಜೆಕ್ಷನ್, ಸ್ಟೆತಸ್ಕೋಪ್ ಹಿಡಿಯುವ ಕೈಗಳಲ್ಲಿ ಬ್ರಷ್, ಬಗೆ ಬಗೆ ಬಣ್ಣದ ಡಬ್ಬಿಹಿಡಿದು ಬೀದಿಗಿಳಿದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು, ಕಾಂಪೌಂಡ್ ಮೇಲೆ ಆಕರ್ಷಕ ಪರಿಸರ ಸಂರಕ್ಷಣೆಯ ಚಿತ್ರಗಳನ್ನು ಬಿಡಿಸಿ ಗಮನ ಸೆಳೆದರು.
ವೈದ್ಯಕೀಯ ಶಿಕ್ಷಣ ಪಡೆಯುವ ಹೆಚ್ಚಿನ ವಿದ್ಯಾರ್ಥಿಗಳ ಗಮನ ಕಲಿಕೆ ಮತ್ತು ರೋಗಿಗಳ ಆರೋಗ್ಯದ ಮೇಲೆ ಇರುತ್ತದೆ. ಆದರೆ, ಹಿಮ್ಸ್‌ನ ಮೆಡಿಕಲ್ ವಿದ್ಯಾರ್ಥಿಗಳು ರೋಗಿಗಳ ಕಾಳಜಿ ಜೊತೆಗೆ ಗೋಡೆಗಳ ಮೇಲೆ ಪರಿಸರ ಸಂರಕ್ಷಣೆಯ ಚಿತ್ರಗಳನ್ನು ಆಕರ್ಷಕವಾಗಿ ಬಿಡಿಸಿ ಪರಿಸರ ಕಾಳಜಿಯನ್ನೂ ಮೆರೆದಿದ್ದಾರೆ.
ಜೂನ್ 5 ರಂದು ನಡೆಯುವ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಿಮ್ಸ್ ಕಾಲೇಜಿನ ವಿದ್ಯಾರ್ಥಿಗಳು ಆಸ್ಪತ್ರೆಯ ಕಾಂಪೌಂಡ್ ಗೋಡೆಗಳ ಮೇಲೆ ಪರಿಸರ ಸಂರಕ್ಷಣೆ ಬಗ್ಗೆ ಯಾವ ಚಿತ್ರಕಲಾವಿದರಿಗೂ ಕಮ್ಮಿಯಿಲ್ಲ ಎಂಬಂತೆ ಹುಲಿ, ಆನೆ, ಝರಿ ಸೇರಿ ಪರಿಸರದ ಮಾದರಿಯನ್ನು ಆಕರ್ಷಕವಾಗಿ ಕಲಾಕುಂಚದಲ್ಲಿ ಚಿತ್ರಿಸಿದ್ದು, ನೋಡುಗರ ಗಮನ ಸೆಳೆಯುತ್ತಿದೆ.
ಈ ವೇಳೆ ಸುದ್ದಿಗಾರರೊಂದೊಗೆ ಮಾತನಾಡಿದ ವಿದ್ಯಾರ್ಥಿಗಳು, ಪರಿಸರ ದಿನಾಚರಣೆ ಪ್ರಯುಕ್ತ ಹಾಸನದ ಮೆಡಿಕಲ್ ಕಾಲೇಜಿನಲ್ಲಿ ಪರಿಸರ ಸಂರಕ್ಷಣೆ ಕುರಿತು ಚಿತ್ರಕಲಾ ಸ್ಪರ್ಧೆ ಏರ್ಪಡಿಸಿದ್ದು, ನಮ್ಮ ಐದು ತಂಡಗಳು ಕಾಂಪೌಂಡ್ ಮೇಲೆ ವಾಯು ಮಾಲಿನ್ಯ ನಿಯಂತ್ರಿಸಿ ಹೆಚ್ಚೆಚ್ಚು ಗಿಡ ನೆಟ್ಟು ಇರುವ ಪರಿಸರವನ್ನು ಉಳಿಸಿ ಬೆಳೆಸುವಂತೆ ಜೊತೆಗೆ ಕಾಡು ಪ್ರಾಣಿಗಳ ಉಳಿವಿನ ಕುರಿತು ಕಾಂಪೌಡ್ ಮೇಲೆ ಹಲವು ಬಗೆಯ ಚಿತ್ರಗಳನ್ನು ಬಿಡಿಸಿ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.