

ಚಿತ್ರದುರ್ಗ: ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಸರ್ಕಾರಿ ಮೆಡಿಕಲ್ ಕಾಲೇಜು ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ವೇಗ ಪಡೆದುಕೊಂಡಿಲ್ಲವೆಂದು ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ‌್ಯದರ್ಶಿ ಮೊಹಮ್ಮದ್ ಮೊಹಿಸೀನ್ ಅತೃಪ್ತಿ ವ್ಯಕ್ತಪಡಿಸಿದರು.
ಶನಿವಾರ ಸ್ಥಳ ಪರಿಶೀಲಿಸಿ ಮಾತನಾಡಿ, ಅನುದಾನವಿದ್ದರೂ ಸಮನ್ವಯ ಕೊರತೆಯಿಂದ ಪ್ರಗತಿಯಾಗಿಲ್ಲ. ಕಾಲಮಿತಿಯಂತೆ 2026 ರೊಳಗೆ ಕಾಲೇಜು ಕಟ್ಟಡ ಪೂರ್ಣವಾಗಬೇಕಿದೆ ಎಂದರು.
ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸೆಕೆಂಡ್ ಬ್ಯಾಚ್ ಹಾಗೂ ಈಗಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೂಡಲೇ ಹಾಸ್ಟೆಲ್ ನಿರ್ಮಾಣವಾಗಬೇಕು. ಹಾಸ್ಟೆಲ್‌ನಿಂದ ಜಿ.ಆರ್.ಹಳ್ಳಿ ಜ್ಞಾನಗಂಗೋತ್ರಿಗೆ ತೆರಳಲು ವಿದ್ಯಾರ್ಥಿಗಳಿಗೆ ಒದಗಿಸಿರುವ ಈಗಿರುವ ವಾಹನ ವ್ಯವಸ್ಥೆಯೇ ಮುಂದುವರಿಯಲಿ. ಸ್ವಂತಕ್ಕೆ ವಾಹನಗಳ ಖರೀದಿ ಬೇಡ ಎಂದು ಸೂಚಿಸಿದರು.
ಕಾಲೇಜನ್ನು ಬೇರೆಡೆ ನಿರ್ಮಿಸಬೇಕೆಂಬ ಮನವಿ ಗಮನಿಸಿದ್ದೇನೆ. ಆದರೆ, ಈಗಾಗಲೇ ಕಾಮಗಾರಿ ಆರಂಭವಾಗಿದೆ. ನಗರದ ಹೃದಯ ಭಾಗದಲ್ಲಿದ್ದರೆ ಬಡ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಸದ್ಯಕ್ಕೆ ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿ ಕೊಡಲಾಗಿದೆ. ಆದರೆ, ಈಗಿರುವ ಮತ್ತು ಸೆಕೆಂಡ್ ಬ್ಯಾಚ್ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಿಗೆ ತಾತ್ಕಾಲಿಕವಾಗಿ ಕಟ್ಟಡ ಗುರುತಿಸಲಾಗಿದೆ ಎಂದರು.
ಕಾಲೇಜು ಕಟ್ಟಡಕ್ಕೆ ಡಿಎಂಎಫ್‌ನಿಂದ 25 ಕೋಟಿ ರೂ. ಬಿಡುಗಡೆ ಮಾಡಲಾಗುವುದು. ಸೆಕೆಂಡ್ ಬ್ಯಾಚ್‌ಗೆ ಪೂರಕವಾಗಿ ಜ್ಞಾನ ಗಂಗೋತ್ರಿಯಲ್ಲಿ ಇನ್ನೂ ನಾಲ್ಕೈದು ಕೊಠಡಿಗಳನ್ನು ಒದಗಿಸುವಂತೆ ದಾವಣಗೆರೆ ವಿವಿ ಕುಲಪತಿಗಳೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಬೆಡ್‌ಸೈಡ್ ಟೀಚಿಂಗ್‌ಗೆ ಮೂರು ಕೊಠಡಿಗಳ ನಿರ್ಮಾಣ ಪ್ರಸ್ತಾವನೆ ಪರಿಶೀಲಿಸುತ್ತೇನೆ. ಮೂರು ತಿಂಗಳಿಗೊಮ್ಮೆ ಅತಿಥಿಗಳು ಬಂದಂತೆ, ನಮ್ಮಲ್ಲಿಗೆ ಬಂದರೆ ಸಮಸ್ಯೆ ಬಗೆಹರಿಯದು. ಜಿಲ್ಲಾಡಳಿತದ ಜತೆ ನಿರಂತರ ಸಂಪರ್ಕ ಇಟ್ಟುಕೊಂಡು ಕೆಲಸ ಮಾಡುವಂತೆ ಕಾಲೇಜು ವಿಶೇಷಾಧಿಕಾರಿ ಡಾ.ಯುವರಾಜ್‌ಗೆ ಡಿಸಿ ತಾಕೀತು ಮಾಡಿದರು.
ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ.ಸುಜಾತಾ ರಾಥೋಡ್, ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಆರ್‌ಎಂಒ ಡಾ.ಆನಂದ ಪ್ರಕಾಶ್, ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಜಿನಿಯರಿಂಗ್ ವಿಭಾಗದ ಇಇ ನಾಗರಾಜು, ಎಇಇ ಚಂದ್ರು, ಎಇ ಎಂ.ಸಿ.ಉಮೇಶ್ ಮತ್ತಿತರರು ಇದ್ದರು.
ಡಿಸಿ ಹೆಗಲಿಗೆ ಡಾಕ್ಟರ್ಸ್ ಕಂದಕ ಇತ್ಯರ್ಥದ ಹೊಣೆ
ಜಿಲ್ಲಾಸ್ಪತ್ರೆಗೆ ನಿಯೋಜನೆಯಾಗಿರುವ ಪಿ.ಜಿ. ಹಾಗೂ ಡ್ಯೂಟಿ ಡಾಕ್ಟರ್ಸ್ ನಡುವಿನ ಹಗ್ಗ-ಜಗ್ಗಾಟ ಕುರಿತಂತೆ ಪ್ರಸ್ತಾಪಿಸಿದ ಮೊಹಿಸೀನ್, ತಕ್ಷಣ ಸಮಸ್ಯೆ ಬಗೆಹರಿಸದ ಡಿಎಸ್ ಡಾ.ಎಸ್.ಪಿ.ರವೀಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಆರೋಗ್ಯ ಸಮಿತಿ ಅಧ್ಯಕ್ಷರಾಗಿರುವ ಎಡಿಸಿ ಬಿ.ಟಿ.ಕುಮಾರಸ್ವಾಮಿಗೆ ತಿಳಿಸದೆ ಸರ್ಕಾರಕ್ಕೆ ಪತ್ರ ಬರೆದಿರುವ ಕ್ರಮಕ್ಕೆ ಅತೃಪ್ತಿ ವ್ಯಕ್ತಪಡಿಸಿದರು.
ಖಾಸಗಿ ನರ್ಸಿಂಗ್ ಹೋಂಗಳಿಗೆ ಪಿ.ಜಿ.ಡಾಕ್ಟರ್‌ಗಳನ್ನು ನಿಯೋಜಿಸಲಾಗುತ್ತಿದೆ ಎಂಬಿತ್ಯಾದಿ ದೂರುಗಳನ್ನು ಪರಿಶೀಲಿಸಿ ಸಮಸ್ಯೆ ಬಗೆಹರಿಸುವ ಹೊಣೆಯನ್ನು ಡಿಸಿ, ಸಿಇಒ ಅವರಿಗೆ ವಹಿಸಿದರು.
ಜಿಲ್ಲಾಸ್ಪತ್ರೆಗೆ ಅಗತ್ಯ ನರ್ಸಿಂಗ್ ಸ್ಟಾಫ್ ಬೇಡಿಕೆ ಪರಿಶೀಲಿಸುವುದಾಗಿ ತಿಳಿಸಿದ ಅವರು, ಜಿಲ್ಲಾಸ್ಪತ್ರೆಯಲ್ಲಿ ನಿಗದಿತ ಅವಧಿಯಲ್ಲಿ ಕರ್ತವ್ಯ ನಿರ್ವಹಿಸದ ವೈದ್ಯರ ವಿರುದ್ಧ ಶಿಸ್ತು ಕ್ರಮ ಖಚಿತ, ತಪ್ಪಿತಸ್ಥರೆಂದು ಕಂಡು ಬಂದಲ್ಲಿ ಮುಲಾಜಿಲ್ಲದೆ ಅಮಾನತು, ಸೇವೆಯಿಂದ ವಜಾಗೊಳಿಸುವುದಾಗಿ ಎಚ್ಚರಿಸಿದರು.