ಮೆಡಿಕಲ್ ಕಾಲೇಜು ವಿವಿ ಮಾದರಿ ಸ್ಥಾಪನೆ

dip (4)002
Published on


ಚಿತ್ರದುರ್ಗ: ವೈದ್ಯಕೀಯ ಕಾಲೇಜು ನಿರ್ಮಾಣ ಪ್ರಾಥಮಿಕ ಶಾಲೆಯಂತಲ್ಲ. ಮುಂದಿನ 50 ವರ್ಷ ಭವಿಷ್ಯದ ದೃಷ್ಟಿಯಿಂದ ವಿಶ್ವವಿದ್ಯಾಲಯದಂತೆ 70-80 ಎಕರೆ ವಿಸ್ತೀರ್ಣದ ವಿಶಾಲ ಸ್ಥಳದಲ್ಲಿ ಅದ್ಬುತವಾಗಿ ನಿರ್ಮಿಸಬೇಕಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಸಲಹೆ ನೀಡಿದರು.

ವೈದ್ಯಕೀಯ ಕಾಲೇಜು ಸ್ಥಾಪನೆ ಸಂಬಂಧ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಅಧಿಕಾರಿ ವರ್ಗ ಎಡವಿದೆ. ಹೀಗಾಗಿ ಪರಿಶೀಲನೆಗೆ ಕೇಂದ್ರ ತಂಡ ಬರುವುದಕ್ಕೂ ಮುನ್ನ ರಾಜ್ಯ ತಂಡ ಸೂಕ್ತ ಸ್ಥಳ ಗುರುತಿಸಬೇಕಿತ್ತು. ಆದರೆ, ಇದನ್ನು ಮಾಡಿಲ್ಲ ಎಂದು ಬೇಸರಿಸಿದರು.

ಜಿಲ್ಲೆಯ ಜನರ, ಜನಪ್ರತಿನಿಧಿಗಳ ಹೋರಾಟದ ಫಲವಾಗಿ ಚಿತ್ರದುರ್ಗಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿದೆ. ಜಿಲ್ಲಾಸ್ಪತ್ರೆ ಆವರಣದ 17 ಎಕರೆ ಜಾಗದಲ್ಲಿ ಸ್ಥಾಪಿಸುವ ಬದಲಿಗೆ, ಕಣಿವೆಯಲ್ಲಿ ಸ್ಥಾಪಿಸುವುದೇ ಸೂಕ್ತ. ಇನ್ನಷ್ಟು ವಿಳಂಬ ಮಾಡುವುದು ಬೇಡ. ಅದಕ್ಕಾಗಿ ಮಾಸ್ಟರ್ ಪ್ಲಾನ್‌ನೊಂದಿಗೆ ವಿಸೃತ ಯೋಜನಾ ವರದಿ ಸಿದ್ಧಪಡಿಸಿ. ಅದಕ್ಕೂ ಮುನ್ನ ನೂತನ ಸಚಿವರು, ಎಲ್ಲ ಶಾಸಕರು, ಎಂಎಲ್ಸಿಗಳು ಒಮ್ಮೆ ಸ್ಥಳ ಪರಿಶೀಲಿಸಲಿ. ನಂತರ ಮತ್ತೊಂದು ಸಭೆ ಕರೆದು ಅಂತಿಮಗೊಳಿಸೋಣ ಎಂದರು.

ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯ ವಿಶೇಷ ಅಧಿಕಾರಿ ಡಾ.ಯುವರಾಜ್ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ತಾತ್ಕಾಲಿಕವಾಗಿ ವೈದ್ಯಕೀಯ ಕಾಲೇಜು ಆರಂಭಿಸಲು ಚಿತ್ರದುರ್ಗ ತಾಲೂಕಿನ ಜಿ.ಆರ್.ಹಳ್ಳಿ ಸ್ನಾತಕೋತ್ತರ ಕೇಂದ್ರ ಇಲ್ಲವೆ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಸೂಕ್ತ ಸ್ಥಳ ಎಂದು ಸಭೆಗೆ ತಿಳಿಸಿದರು.

ಸೂಕ್ತ ಕಟ್ಟಡ ಹಾಗೂ ಸ್ಥಳ ನಿಗದಿ ಮಾಡುವ ಕುರಿತು ಇನ್ನೊಮ್ಮೆ ಪರೀಶೀಲನೆ ನಡೆಸಿ ವಾರದೊಳಗೆ ವರದಿ ನೀಡಬೇಕು. ಏಕೆಂದರೆ ಈಗಾಗಲೇ ವಿದ್ಯಾರ್ಥಿಗಳು ಓದುತ್ತಿದ್ದಾರೆ. ದಾವಣಗೆರೆ ವಿಶ್ವವಿದ್ಯಾಲಯದ ಮೇಲೆ ಸವಾರಿ ಮಾಡಿ ಬಲವಂತದಿಂದ ಸ್ನಾತಕೋತ್ತರ ಕೇಂದ್ರ ಅಥವಾ ವಿಜ್ಞಾನ ಕಾಲೇಜನ್ನು ಸ್ವಾಧೀನ ಪಡಿಸಿಕೊಳ್ಳಲು ಸರ್ಕಾರದಿಂದಲೂ ಸಾಧ್ಯವಿಲ್ಲ. ಉಪಕುಲಪತಿಗಳು ಸಂಪೂರ್ಣ ಒಪ್ಪಿ ಸ್ಥಳ ನೀಡಿದರೆ ಯಾವುದೇ ಅಭ್ಯಂತರವಿಲ್ಲ. ಮುಂದಿನ ಸಭೆಗೆ ಕಡ್ಡಾಯವಾಗಿ ದಾವಣಗೆರೆ ವಿ.ವಿ. ಅಧಿಕಾರಿಗಳು ಹಾಜರಿಬೇಕು ಎಂದು ಸಚಿವರು ತಾಕೀತು ಮಾಡಿದರು.

ಕಾಲೇಜು ಸ್ಥಾಪನೆಗೆ ಡಿಎಂಎಫ್ ಅನುದಾನ ಹಂಚಿಕೆ ಮಾಡುವ ಸಂಬಂಧ ಜಿಲ್ಲಾ ಸಚಿವರ ಅಧ್ಯಕ್ಷತೆಯಲ್ಲಿ ಶಾಸಕರು, ಜನಪ್ರತಿನಿಧಿಗಳ ಸಭೆ ಆಯೋಜಿಸಿ. ಇದರ ಜತೆಗೆ ಕೆಎಂಇಆರ್‌ಸಿ ಅನುದಾನ ಬಳಸುವ ಕುರಿತು ಅಭಿಪ್ರಾಯ ಸಂಗ್ರಹಿಸುವಂತೆ ಡಿಸಿಗೆ ಸೂಚನೆ ನೀಡಿದರು.

110 ಎಕರೆ ಸರ್ಕಾರಿ ಜಮೀನು:

ಚಿತ್ರದುರ್ಗ ನಗರಸಭೆ ವ್ಯಾಪ್ತಿಗೆ ಹತ್ತಿರವಿರುವ ಇಂಗಳದಾಳು ಗ್ರಾಮದ ಬಳಿ 110 ಎಕರೆ ಸರ್ಕಾರಿ ಜಮೀನು ಲಭ್ಯವಿದೆ. ಇದರಲ್ಲಿ 80 ಎಕರೆ ಜಮೀನಿಗೆ ಮಂಜೂರಾತಿಗಾಗಿ 57 ಅರ್ಜಿಗಳು ಬಂದಿವೆ. 30 ಎಕರೆ ಪ್ರದೇಶದಲ್ಲಿ ನಾಲ್ಕು ಗುಡ್ಡಗಳು ಇವೆ ಎಂದು ಉಪವಿಭಾಗಧಿಕಾರಿ ಆರ್.ಚಂದ್ರಯ್ಯ ಸಭೆಗೆ ಮಾಹಿತಿ ನೀಡಿದರು.
ಈ ಸರ್ಕಾರಿ ಜಮೀನಿನಲ್ಲಿ ಯಾವ ಖಾಸಗಿ ವ್ಯಕ್ತಿಗಳು ಉಳುಮೆ ಮಾಡುತ್ತಿಲ್ಲ. ಜಮೀನು ಮಂಜೂರಾತಿಗೆ ಬಂದ ಅರ್ಜಿಗಳನ್ನು ವಜಾ ಮಾಡಿ. ಈ ಸ್ಥಳ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸೂಕ್ತವಾಗಿದೆ. ಸರ್ಕಾರಿ ಜಾಗವಿದ್ದರೂ ದಿನ ದೂಡುವುದು ಬೇಡವೆಂದು ಸಚಿವರು ಹೇಳಿದರು.
ಶಾಸಕ ಕೆ.ಸಿ.ವೀರೇಂದ್ರ, ಎಂಎಲ್ಸಿ ಕೆ.ಎಸ್.ನವೀನ್, ಜಿಲ್ಲಾಧಿಕಾರಿ ಜಿ.ಆರ್.ಜೆ. ದಿವ್ಯಾಪ್ರಭು , ಜಿಪಂ ಸಿಇಒ ಎಂ.ಎಸ್.ದಿವಾಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಇತರರಿದ್ದರು.

ನೂರೈವತ್ತು ಮಂದಿಗೆ ಪ್ರವೇಶ
ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ವೈದ್ಯಕೀಯ ಕಾಲೇಜು ಆರಂಭಕ್ಕೆ ಅನುಮತಿ, 150 ವಿದ್ಯಾರ್ಥಿಗಳ ಪ್ರವೇಶಾತಿಗೆ ಒಪ್ಪಿಗೆ ದೊರೆತಿದೆ. ಈ ಕುರಿತು ರಾಷ್ಟ್ರೀಯ ವೈದ್ಯಕೀಯ ಪರಿಷತ್, ರಾಜೀವ್‌ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯವು ಅನುಮೋದನೆ ನೀಡಿವೆ. ಕಾಲೇಜಿಗೆ 75 ಸಿಬ್ಬಂದಿಗಳ ಅವಶ್ಯಕತೆಯಿದೆ. ಈ ಕುರಿತು ಹಣಕಾಸು ಇಲಾಖೆಗೆ ಮಂಜೂರಾತಿಗೆ ಪತ್ರ ಬರೆಯಲಾಗಿದೆ ಎಂದು ಯುವರಾಜ್ ತಿಳಿಸಿದರು.

ಛಾಯಾಚಿತ್ರದೊಂದಿಗೆ ಸಂಪೂರ್ಣ ವರದಿ ಸಲ್ಲಿಸಿ
ಚಿತ್ರದುರ್ಗ: ಜಿಲ್ಲೆಯಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಈವರೆಗೂ ಕೈಗೊಂಡಿರುವ ಕಾಮಗಾರಿಗಳ ಪರಿಶೀಲನೆ ನಡೆಸಿ, ಛಾಯಾಚಿತ್ರದೊಂದಿಗೆ ಸಂಪೂರ್ಣ ವರದಿ ಸಲ್ಲಿಸಬೇಕು ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸೂಚಿಸಿದರು.
ಶುಕ್ರವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಶೇ.80ರಷ್ಟು ಪೂರ್ಣಗೊಂಡ ಕಾಮಗಾರಿಗಳ ಸಂಪೂರ್ಣ ಅನುದಾನ ಬಿಡುಗಡೆ ಮಾಡಲು ಅನುಕೂಲವಾಗುವಂತೆ ಬಿಲ್ ಸಲ್ಲಿಸಬೇಕು. ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಸಂಬಂಧಿಸಿದವರಿಗೆ ತಾಕೀತು ಮಾಡಿದರು.
ಡಿಸಿ ದಿವ್ಯಾಪ್ರಭು ಮಾತನಾಡಿ, ಯೋಜನೆಯಡಿ 2019-20ರಲ್ಲಿ ಮಂಜೂರಾದ 101 ಕಾಮಗಾರಿಗಳಲ್ಲಿ 68 ಪೂರ್ಣಗೊಂಡಿದ್ದು, 33 ಪ್ರಗತಿಯಲ್ಲಿವೆ. ಈ ವರ್ಷವೂ ಸೇರಿ 2021-22 ಒಳಗೊಂಡು 8.5 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಈಗಾಗಲೇ 7 ಕೋಟಿ ರೂ. ಖರ್ಚಾಗಿದೆ. ಜುಲೈ ಅಂತ್ಯದೊಳಗೆ ಎಲ್ಲ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net