ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಚಾಲನೆಶಾಸಕ ಡಾ ಕೆ.ಸುಧಾಕರ್ ಉದ್ಘಾರ

27CBP3
Published on

ಚಿಕ್ಕಬಳ್ಳಾಪುರ :  ಮೆಡಿಕಲ್ ಕಾಲೇಜು ಮಂಜೂರಾತಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಿಟ್ಟ ನಿರ್ಧಾರ ಕೈಗೊಳ್ಳದೇ ಇದ್ದಿದ್ದರೆ ಜಿಲ್ಲೆಗೆ ಅನ್ಯಾಯವಾಗುತ್ತಿತ್ತು ಎಂದು ಶಾಸಕ ಡಾ ಕೆ.ಸುಧಾಕರ್ ತಿಳಿಸಿದರು.

ತಾಲೂಕಿನ ಅರೂರು ಬಳಿ 525 ಕೋಟಿ ರೂ. ವೆಚ್ಚದ ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ವೈದ್ಯನಾಗಿ ಆರೋಗ್ಯದ ಮಹತ್ವ ಅರಿತಿದ್ದರಿಂದಲೇ ಇಲ್ಲಿನ ಜನರಿಗೆ ಮೆಡಿಕಲ್ ಕಾಲೇಜು ನಿರ್ಮಾಣದ ಭರವಸೆ ನೀಡಲಾಗಿತ್ತು. ಇದಕ್ಕಾಗಿ ಒತ್ತಡ ಹೇರಿಕೊಂಡು ಬಂದಿದ್ದರ ನಡುವೆಯೂ ಸಮ್ಮಿಶ್ರ ಸರ್ಕಾರ ಕನಕಪುರಕ್ಕೆ ಕೊಟ್ಟು ಚಿಕ್ಕಬಳ್ಳಾಪುರಕ್ಕೆ ಅನ್ಯಾಯ ಮಾಡಿತು. ಇದರಿಂದ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ 6ತಿಂಗಳ ಅನರ್ಹತೆಯಿಂದ ನರಕಯಾತನೆ ಅನುಭವಿಸಬೇಕಾಯಿತು. ಆದರೆ ಈಗ ನಮ್ಮೆಲ್ಲರ ಕನಸು ನನಸಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಬರದಿಂದ ತತ್ತರಿಸಿರುವುದರ ನಡುವೆ ಹಿಂದುಳಿದ ಪ್ರದೇಶ ಎನಿಸಿಕೊಂಡಿರುವ ಈ ಭಾಗದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾಗುತ್ತಿರುವುದು ಸಂತಸದ ವಿಚಾರ. ಜನರು ಸರ್ವಾಂಗೀಣ ಪ್ರಗತಿ ಕಾಣಲು ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಮನವಿ ಮಾಡಿದರು.

ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಉಪಾಧ್ಯಕ್ಷೆ ನಿರ್ಮಲ, ಸದಸ್ಯರಾದ ಪಿ.ಎನ್.ಕೇಶವರೆಡ್ಡಿ, ಕೆ.ಸಿ.ರಾಜಾಕಾಂತ್, ತಾಪಂ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಪಿ.ನಾಗೇಶ್, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ಮುಖಂಡರಾದ ಮರಳುಕುಂಟೆ ಕೃಷ್ಣಮೂರ್ತಿ, ವೆಂಕಟನಾರಾಯಣಪ್ಪ ಇತರರಿದ್ದರು.

ಹೊಸದಾಗಿ 6 ಕೆರೆ ಸೇರ್ಪಡೆ : ನೀರಾವರಿ ಯೋಜನೆಯ ತ್ವರಿತ ಅನುಷ್ಠಾನವೇ ನಮ್ಮ ಪ್ರಮುಖ ಗುರಿ. ಇನ್ನೇನು 10 ರಿಂದ 15 ದಿನಗಳೊಳಗೆ ಕಂದವಾರ ಕೆರೆಗೆ ಎಚ್.ಎನ್.ವ್ಯಾಲಿ ಮೂಲಕ ತ್ಯಾಜ್ಯ ಸಂಸ್ಕರಿಸಿದ ನೀರನ್ನು ಹರಿಸಲಾಗುವುದು. ಪ್ರಸ್ತುತ ಯೋಜನೆಯಲ್ಲಿ ಕ್ಷೇತ್ರದ 26 ಕೆರೆಗಳನ್ನು ಆಯ್ಕೆ ಮಾಡಿಕೊಂಡಿದ್ದು ಹೊಸದಾಗಿ 6 ಕೆರೆಗಳನ್ನು ಸೇರಿಸಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಎಚ್.ಎನ್.ವ್ಯಾಲಿ ನೀರು ಹರಿಯುವ ಹಿನ್ನೆಲೆಯಲ್ಲಿ ೆಬ್ರವರಿ ಕೊನೇ ವಾರದಲ್ಲಿ ಜಿಲ್ಲಾ ಕೇಂದ್ರದಲ್ಲಿ ಎರಡು ದಿನ ಜಲಜಾತ್ರೆ ಮತ್ತು ಜಾನಪದ ಜಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.

ತ್ವರಿತವಾಗಿ ಆರಂಭಿಸಿ: ಪ್ರತಿದಿನ ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿ ದಾಖಲಾತಿ ಮತ್ತು ಚಿಕಿತ್ಸೆಗೆ ನಿರಾಕರಣೆ, ಹಾಸಿಗೆ ಕೊರತೆ ಸೇರಿ ಹಲವು ಸಮಸ್ಯೆಗಳ ಬಗ್ಗೆಯೇ ಹೆಚ್ಚಿಗೆ ದೂರುಗಳು ಕೇಳಿ ಬರುತ್ತಿವೆ. ಜಿಲ್ಲಾಸ್ಪತ್ರೆಯ ಸುಧಾರಣೆಯ ಜತೆಗೆ ಮೆಡಿಕಲ್ ಕಾಲೇಜು ತ್ವರಿತವಾಗಿ ಕಾರ್ಯಾರಂಭಿಸಬೇಕು ಎಂದು ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ ತಿಳಿಸಿದರು.

ಸಿಎಂ ಬಿಎಸ್‌ವೈ ಭೂಮಿಪೂಜೆ:  ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಶಾಸಕ ಡಾ ಕೆ.ಸುಧಾಕರ್ ನಡುವೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಮೆಡಿಕಲ್ ಕಾಲೇಜು ಚಿಕ್ಕಬಳ್ಳಾಪುರಕ್ಕೆ ಮಂಜೂರಾಗಿದ್ದು ನ.8 ರಂದು ಸರ್ ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೂಮಿಪೂಜೆ ನೆರವೇರಿಸಿದ್ದರು. ಸೋಮವಾರ ಕಾಮಗಾರಿಗೆ ಚಾಲನೆ ನೀಡಲಾಯಿತು.

525 ಕೋಟಿ ರೂ. ಮಂಜೂರು: ರಾಜ್ಯ ಸರ್ಕಾರ ಕಾಲೇಜು ನಿರ್ಮಾಣಕ್ಕಾಗಿ ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಸಮೀಪ 59.29 ಎಕರೆ ಜಮೀನು ಮಂಜೂರು ಮಾಡಿದೆ. ಜತೆಗೆ 525 ಕೋಟಿ ರೂ. ಅನುದಾನ ನೀಡಿದೆ. ಇನ್ನು ಟೆಂಡರ್ ನಿಯಮಾನುಸಾರ ಗುತ್ತಿಗೆದಾರರು 3 ವರ್ಷದೊಳಗೆ ಕಾಮಗಾರಿ ಮುಕ್ತಾಯಗೊಳಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net