

ಬಾಗಲಕೋಟೆ: ಮಹಾತ್ಮ ಗಾಂಧೀಜಿ, ಅಬ್ದುಲ್ ಕಲಾಂ ಆದರ್ಶನಗಳನ್ನು ಮೈಗೂಡಿಸಿಕೊಂಡು ಗ್ರಾಮೀಣ ಸ್ವರಾಜ್ಯ ಪರಿಕಲ್ಪನೆ ಸಾಕಾರಿಗೊಳಿಸಲು ನನ್ನ ಜೀವನ ಮುಡುಪಾಗಿಟ್ಟಿದ್ದೇನೆ. ಇದೀಗ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ಜನರಿಗಾಗಿ ಮೆಡಿಕಲ್ ಕಾಲೇಜು ಆರಂಭಿಸಿ ನಿಮ್ಮ ಉಡಿಗೆ ಹಾಕಿದ್ದೇನೆ ಸಂಸ್ಥೆ ಉಳಿಸೋದು-ಬೆಳೆಸೋದು ನಿಮ್ಮ ಕೈಯಲ್ಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.
ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಬುಧವಾರ ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಎಸ್.ಆರ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ತಮ್ಮ ಸೇವೆಯ ಉದ್ದೇಶ, ನಡೆದು ಬಂದ ದಾರಿಯನ್ನು ನೆರೆದ ಜನರ ಮುಂದೆ ಹರಿವಿದರು.
ಯಾವುದೇ ಲಾಭದ ಉದ್ದೇಶವಿಟ್ಟುಕೊಂಡು ಮೆಡಿಕಲ್ ಕಾಲೇಜು ಆರಂಭಿಸುತ್ತಿಲ್ಲ. ದೊಡ್ಡ ದೊಡ್ಡ ನಗರಗಳಲ್ಲಿ ಇಂತಹ ಕಾಲೇಜುಗಳನ್ನು ಕಟ್ಟಿ ಬೆಳೆಸಲಾಗುತ್ತದೆ. ನನಗೂ ಸಾಕಷ್ಟು ಜನರು ಬಾಡಗಂಡಿ ಬಿಟ್ಟು ಬೇರೆಡೆ ಸ್ಥಾಪಿಸಲು ಸಲಹೆ ನೀಡಿದರು. ಆದರೇ ಹುಟ್ಟಿದ ಊರಿಗೆ ಹುಟ್ಟಿದ ಹಬ್ಬದ ಊಡೊಗೊರೆ ನೀಡಬೇಕು ಎನ್ನುವ ಉದ್ದೇಶದಿಂದ ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಕೃಷ್ಣಾ ನದಿ ತೀರಿದ ೩೦೦ ಗ್ರಾಮಗಳ ಬಡವರು, ಮಧವರ್ಗದವರ ಅನುಕೂಲಕ್ಕಾಗಿ ಆರೋಗ್ಯಧಾಮ ಆರಂಭಿಸಿದ್ದೇನೆ ಎಂದರು.
ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದ ನನಗೆ ಅವರ ನೋವು, ನಲಿವು ಬಗ್ಗೆ ಅರಿವು ಇದೆ. ಎಲ್‌ಎಲ್‌ಬಿ ಪೂರ್ಣಗೊಳಿಸಿದ ಬಳಿಕ ಗ್ರಾಮಕ್ಕೆ ಮರಳಿ ಬಂದೆ. ಆದರೇ ತಂದೆ, ತಾಯಿಗಳು ವಕೀಲ ವೃತ್ತಿ ಆರಂಭಿಸಿದರು. ನಂತರ ಜನ ಸಂಪರ್ಕ ಬೆಳೆದು ಜನರ ಒತ್ತಾಯಕ್ಕೆ ಮಣಿದು ಸಾರ್ವಜನಿಕ ಆರಂಭಿಸಿದೆ. ನಂತರ ಜಿಲ್ಲಾ ಪರಿಷತ್, ಕೆಪಿಸಿಸಿ ಕಾರ್ಯಾಧ್ಯಕ್ಷ, ಸಚಿವ, ವಿಧಾನ ಪರಿಷತ್ ಸದಸ್ಯ, ವಿಪಕ್ಷ ನಾಯಕನಾಗಿ ಸೇವೆ ಸಲ್ಲಿಸಿದೆ. ಸಹಕಾರಿ ರಂಗಕ್ಕೆ ಪಾದಾರ್ಪಣೆ ಮಾಡಿ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್, ಬಾಪೂಜಿ ಸಹಕಾರಿ ಸಂಸ್ಥೆ ಆರಂಭಿಸಿದೆ. ಸಕ್ಕರೆ ಕಾರ್ಖಾನೆ ಕೂಡಾ ರೈತರ ಬಾಳಿಗೆ ಬೆಳಕಾಯಿತು. ೧೫ ಲಕ್ಷ ಮೆಟಿಕ್ ಟನ್ ಕಬ್ಬು ನುರಿಸುವುದು, ೨ ಲಕ್ಷ ಲೀಟರ್ ಎಥಿನಾಲ್ ಉತ್ಪಾದನೆಯಾಗುತ್ತಿದೆ ಎಂದು ಹೇಳಿದರು.
ಕೆಲವು ವರ್ಷಗಳಿಂದ ವರಿಷ್ಠರು ರಾಜಕೀಯ ವಿಶ್ರಾಂತಿ ನೀಡಿದರು. ಅದರ ಫಲವಾಗಿ ಹೊಸ ಪ್ರಯೋಗಕ್ಕೆ ಮುಂದಾದೆ. ಇದರಿಂದ ಮೆಡಿಕಲ್ ಕಾಲೇಜಿಗೆ ಪ್ರಥಮ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿತು. ಮಣಿಪಾಲ ಆಸ್ಪತ್ರೆ ರೀತಿಯಲ್ಲಿ ನಮ್ಮ ಸಂಸ್ಥೆ ಬೆಳೆಯಬೇಕು. ಅದು ಆರೋಗ್ಯ ಸೇವೆಯ ಕೇಂದ್ರವಾಗಬೇಕು. ಎಷ್ಟೇ ಸವಾಲ್ ಎದುರಾದರು ಕಷ್ಟಪಟ್ಟು ಸಂಸ್ಥೆ ಬೆಳೆಸಬೇಕು. ಪಕ್ಷಾತೀತವಾಗಿ ಎಲ್ಲರು ಸಹಕಾರಿ ನೀಡಿದ್ದಾರೆ ಎಂದು ಸ್ಮರಿಸಿದರು.
ರೆಹೊಸಳ್ಳಿಯ ವೇಮಾನಂದ ಸ್ವಾಮೀಜಿ, ಸಚಿವರಾದ ಡಾ.ಜಿ ಪರಮೇಶ್ವರ, ಡಾ.ಶರಣಪ್ರಕಾಶ ಪಾಟೀಲ, ದಿನೇಶ ಗುಂಡೂರಾವ, ಆರ್.ಬಿ.ತಿಮ್ಮಾಪೂರ, ಶಾಸಕ ಸಿದ್ದು ಸವದಿ, ವಿ.ಪ ಸದಸ್ಯ ಹಣಮಂತ ನಿರಾಣಿ, ಬಾಗಲಕೋಟೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ಡಾ.ಎಂ.ಕೆ.ರಮೇಶಕುಮಾರ, ಡಾ.ನವೀನ ಎಸ್, ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಪಾಟೀಲ, ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಲ್.ಬಿ.ಕುರ್ತಕೋಟಿ, ಬಾಪೂಜಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಸಿ.ಮೋಟಗಿ, ದಯಾನಂದ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.