

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) 12 ಮೆಟ್ರೋ ನಿಲ್ದಾಣಗಳಲ್ಲಿನ ಶೌಚಗೃಹ ಬಳಕೆಗೆ ಶುಲ್ಕ ವಿಧಿಸುವ ಮೂಲಕ ಪ್ರಯಾಣಿಕರ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ಇದೀಗ ಮಂಡಳಿ ಯೋಜನೆಯನ್ನು ಕೈಬಿಟ್ಟಿದೆ. ಅಲ್ಲದೆ, ಸುಲಭ್ ಇಂಟರ್ನ್ಯಾಷನಲ್ (ಖಾಸಗಿ ಸಂಸ್ಥೆ) ಜತೆ ಮಾಡಿಕೊಂಡಿದ್ದ ಒಪ್ಪಂದವನ್ನೂ ಮುರಿದುಕೊಂಡಿದೆ.
ವಾರದ ಹಿಂದೆ ಮೆಟ್ರೋ ನಿಲ್ದಾಣಗಳ ಸಮೀಪವಿದ್ದ ಶೌಚಗೃಹ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದ್ದ ಈ ಖಾಸಗಿ ಸಂಸ್ಥೆ, ಶುಲ್ಕ ಸಂಗ್ರಹಕ್ಕೆ ಮುಂದಾಗಿತ್ತು. ಆದರೆ, ಬಿಎಂಆರ್ಸಿಎಲ್ನ ಈ ನಿರ್ಧಾರಕ್ಕೆ ಪ್ರಯಾಣಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ನ್ಯಾಷನಲ್ ಕಾಲೇಜು, ಸೌತ್ ಎಂಡ್ ಸರ್ಕಲ್, ಲಾಲ್ಬಾಗ್, ಜಯನಗರ, ರಾಷ್ಟ್ರೀಯ ವಿದ್ಯಾಲಯ ರಸ್ತೆ, ಜಯಪ್ರಕಾಶ್ ನಗರ, ಬನಶಂಕರಿ, ಯಲಚೇನಹಳ್ಳಿ, ಸರ್ ಎಂ.ವಿಶ್ವೇಶ್ವರಯ್ಯ ನಿಲ್ದಾಣ ಸೆಂಟ್ರಲ್ ಕಾಲೇಜು, ಡಾ.ಬಿ.ಆರ್.ಅಂಬೇಡ್ಕರ್ ನಿಲ್ದಾಣ ವಿಧಾನಸೌಧ, ಕಬ್ಬನ್ ಪಾರ್ಕ್ ಮತ್ತು ಕ್ರಾಂತಿವೀರ ರೈಲ್ವೆ ನಿಲ್ದಾಣಗಳ ಶೌಚಗೃಹಗಳಲ್ಲಿ ಮೂತ್ರ ವಿಸರ್ಜನೆಗೆ 2 ರೂ.ಮತ್ತು ಶೌಚ ಬಳಕೆಗೆ 5 ರೂ.ಶುಲ್ಕ ಸಂಗ್ರಹಿಸಲಾಗುತ್ತಿತ್ತು.
ಇತ್ತೀಚೆಗೆ ಮೆಟ್ರೋ ಪ್ರಯಾಣ ದರ ದುಪ್ಪಟ್ಟು ಏರಿಕೆಯಿಂದ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಬಿಎಂಆರ್ಸಿಎಲ್, 12 ಮೆಟ್ರೋ ನಿಲ್ದಾಣಗಳಲ್ಲಿನ ಶೌಚಗೃಹ ಬಳಕೆಗೆ ಶುಲ್ಕ ವಿಧಿಸುವ ಮೂಲಕ ಮತ್ತೆ ಮತ್ತೆ ಪ್ರಯಾಣಿಕರಿಗೆ ತಲೆನೋವು ಉಂಟುಮಾಡಿತ್ತು.
ಈ ಬಾರಿ ಮೆಟ್ರೋ ಪ್ರಯಾಣಿಕರಿಂದ ಡಾ.ಬಿಆರ್.ಅಂಬೇಡ್ಕರ್ ಮೆಟ್ರೋ ನಿಲ್ದಾಣ ವಿಧಾನಸೌದಾ ಹಾಗೂ ಹಲವು ನಿಲ್ದಾಣಗಳಲ್ಲಿ ಪ್ರತಿಭಟನೆಗಳು ನಡೆದಿದ್ದು, "ಮೆಟ್ರೋ ಸಾರ್ವಜನಿಕ ಸಂಪರ್ಕ ಮಾಧ್ಯಮವೇ ಹೊರತು, ಆದಾಯದ ಮೂಲವಲ್ಲ' ಎಂಬ ಆಕ್ರೋಶಗಳು ಶಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಶೌಚಗೃಹ ಶುಲ್ಕವನ್ನು ತೆಗೆದು ಹಾಕಿದ್ದು ಮಾತ್ರವಲ್ಲದೆ, ನಿರ್ವಹಣೆಯ ಹೊಣೆಯನ್ನೂ ಹೊತ್ತುಕೊಂಡಿದೆ ಎಂದು ಬಿಎಂಆರ್ಸಿಎಲ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.