

ಮೈಸೂರು; ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಕೆಪಿಸಿಸಿ ಮಹಿಳಾ ಘಟಕದಿಂದ ಶುಕ್ರವಾರ ಚಾಮುಂಡೇಶ್ವರಿ ದೇವಿಗೆ ಹರಕೆ ತೀರಿಸಲಾಯಿತು.
ಪಕ್ಷದ ಕಾರ್ಯಕರ್ತೆಯರು ಮೆಟ್ಟಿಲಿನ ಮೂಲಕ ಚಾಮುಂಡಿಬೆಟ್ಟವನ್ನು ಹತ್ತಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಅರ್ಪಣೆ ಮಾಡಿದರು.
ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೆಟ್ಟಾ ಡಿಸೋಜಾ, ರಾಜ್ಯ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಹರಕೆ ತೀರಿಸುವ ಕಾರ್ಯಕ್ರಮ ನಡೆಯಿತು. ನೂರಾರು ಮಹಿಳೆಯರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಪುಷ್ಪಾ ಅಮರನಾಥ್, ಕಳೆದ ಮಾರ್ಚ್‌ನಲ್ಲಿ ಮೈಸೂರಿನಲ್ಲಿ ಮಹಿಳಾ ಕಾಂಗ್ರೆಸ್ ಸಮಾವೇಶ ನಡೆದ ಸಂದರ್ಭದಲ್ಲಿ ನಾವೆಲ್ಲರೂ ಸೇರಿ ದೇವಿಗೆ ಹರಕೆ ಹೊತ್ತಿದ್ದೆವು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾಡದೇವಿಯ ಸನ್ನಿಧಿಗೆ ಬಂದು ಬಾಗಿನ ಸೇವೆ ಸಲ್ಲಿಸಲು ತೀರ್ಮಾನಿಸಲಾಗಿತ್ತು. ಅದರಂತೆ ಹರಕೆ ತೀರಿಸಲಾಗಿದೆ. ನಾಡಿನಲ್ಲಿ ಸುಭಿಕ್ಷೆಯಿಂದ ಸರ್ಕಾರ ನಡೆಯಲಿ ಮತ್ತು ಮುಂದಿನ ಲೋಕಸಭಾ ಚುನಾವಣೆಯಲ್ಲೂ ಹೆಚ್ಚಿನ ಸ್ಥಾನಗಳನ್ನು ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲಲಿ ಎಂದು ದೇವರ ಬಳಿ ಪ್ರಾರ್ಥನೆ ಮಾಡಲಾಗಿದೆ ಎಂದು ತಿಳಿಸಿದರು.
ಪಕ್ಷದ ಮುಖಂಡರಾದ ಪುಷ್ಪಲತಾ ಚಿಕ್ಕಣ್ಣ, ಪುಷ್ಪವಲ್ಲಿ ಇತರರು ಇದ್ದರು.