ಮೆಗ್ಗಾನ್ ಬದಲಿಸಲು ಸಜ್ಜಾಗಿ

k s eshwar (1)
Published on

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆ ಬಗ್ಗೆ ಇರುವ ಕೆಟ್ಟ ಅಭಿಪ್ರಾಯ ತೊಲಗಿಸಿ ಒಳ್ಳೆಯ ಆಸ್ಪತ್ರೆಗಳ ಸಾಲಿನಲ್ಲಿ ಗುರುತಿಸಿಕೊಳ್ಳುವಂತೆ ಶ್ರಮಿಸಿ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಸಿಮ್್ಸ ನಿರ್ದೇಶಕರ ಕಚೇರಿಯಲ್ಲಿ ಬುಧವಾರ ಮೆಗ್ಗಾನ್ ಆಸ್ಪತ್ರೆಯ ಎಲ್ಲ ವಿಭಾಗಗಳ ಮುಖ್ಯಸ್ಥರ ಸಭೆ ನಡೆಸಿದ ಅವರು, ಮೆಗ್ಗಾನ್ ಆಸ್ಪತ್ರೆ ಬಗ್ಗೆ ಜನರಲ್ಲಿ ಸದಭಿಪ್ರಾಯ ಇಲ್ಲ. ಎಚ್​ಒಡಿಗಳು ಕಚೇರಿಯಲ್ಲೇ ಇರಲ್ಲ ಎಂಬ ಬಗ್ಗೆ ಸಾಕಷ್ಟು ದೂರು ಬಂದಿವೆ. ಇನ್ಮುಂದೆ ಆ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು. ಎಚ್​ಒಡಿಗಳು ಇದ್ದರೆ ಜ್ಯೂನಿಯರ್​ಗಳು ಕೂಡ ಕೆಲಸ ಮಾಡುತ್ತಾರೆ. ಇಲ್ಲದಿದ್ದರೆ ಹೇಳುವವರು ಕೇಳುವವರು ಯಾರೂ ಇಲ್ಲದಂತೆ ಆಗಲಿದೆ ಎಂದರು.

ಯಾವುದೇ ಕಾರಣಕ್ಕೂ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ರೆಫರ್ ಮಾಡಬಾರದು. ತೀರಾ ಅನಿವಾರ್ಯ ಇದ್ದರೆ ಜ್ಯೂನಿಯರ್ ವೈದ್ಯರು ಕಳುಹಿಸುವಂತಿಲ್ಲ. ಕಡ್ಡಾಯವಾಗಿಯೇ ಆಯಾ ವಿಭಾಗದ ಎಚ್​ಒಡಿಗಳೇ ಆ ಕೆಲಸ ಮಾಡಬೇಕು. ಬೇರೆ ಆಸ್ಪತ್ರೆಗೆ ಕಳುಹಿಸುವ ಮೂಲಕ ಜವಾಬ್ದಾರಿಗಳಿಂದ ನುಣುಚಿಕೊಳ್ಳಬಾರದು. ಜನರ ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅದು ನಿಮಗೆ ಸಿಕ್ಕಿದ್ದು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

ಇನ್ಮುಂದೆ ಮರಣ ಲೆಕ್ಕ ಕಡ್ಡಾಯ: ಮೆಗ್ಗಾನ್ ಆಸ್ಪತ್ರೆಯಲ್ಲಿ ಈಗಾಗಲೇ ಮಂಜೂರಾಗಿರುವ ಖಾಲಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಮುಂದಿನ ಸಭೆಯೊಳಗೆ ಭರ್ತಿ ಮಾಡಿಕೊಂಡಿರಬೇಕು. ಇಲ್ಲವಾದರೆ ಅಧಿಸೂಚನೆ ಹೊರಡಿಸಿರಬೇಕು. ಎಚ್​ಒಡಿಗಳು ಕಡ್ಡಾಯವಾಗಿ ನೋಂದಣಿ ಪುಸ್ತಕಗಳನ್ನು ನಿರ್ವಹಣೆ ಮಾಡಬೇಕು. ಜತೆಗೆ ಇನ್ಮುಂದೆ ಕಡ್ಡಾಯವಾಗಿ ಮರಣದ ಲೆಕ್ಕವನ್ನು ಆಯಾ ವಿಭಾಗದ ಮುಖ್ಯಸ್ಥರೇ ನೋಡಿಕೊಳ್ಳಬೇಕು ಎಂದು ಡಿಸಿ ಕೆ.ಬಿ.ಶಿವಕುಮಾರ್ ಹೇಳಿದರು.

ಬಯೋಮೆಟ್ರಿಕ್ ಕಡ್ಡಾಯಗೊಳಿಸಬೇಕು. ಪರಿಕರಗಳ ಹಾನಿ ಅಥವಾ ಕಾರ್ಯನಿರ್ವಹಣೆಯನ್ನು ಮೆಡಿಕಲ್ ಇಂಜಿನಿಯರ್​ಗಳು ಖುದ್ದಾಗಿ ಪರಿಶೀಲಿಸಿ ಸಿಮ್್ಸ ನಿರ್ದೇಶಕರಿಗೆ ಮಾಹಿತಿ ನೀಡಬೇಕು. ಗರ್ಭಿಣಿಯರನ್ನೂ ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡುತ್ತಿರುವ ಬಗ್ಗೆ ದೂರು ಬರುತ್ತಿದ್ದು, ಬೇರೆ ಆಸ್ಪತ್ರೆಗಳಿಗೆ ರೆಫರ್ ಮಾಡುವಂತಿಲ್ಲ. ತುರ್ತು ಅಥವಾ ಅನಿವಾರ್ಯವಿದ್ದರೆ ಮಾತ್ರ ಎಚ್​ಡಿಒಗಳ ಅನುಮತಿ ಪಡೆದು ರೆಫರ್ ಮಾಡಬೇಕು ಎಂದು ಸೂಚಿಸಿದರು.

ಖಾಸಗಿ ಆಂಬುಲೆನ್ಸ್​ಗೆ ಹಾಕಿ ಕಡಿವಾಣ: ಮೆಗ್ಗಾನ್ ಆಸ್ಪತ್ರೆ ಮುಂದೆ ನಿಲ್ಲುವ ಖಾಸಗಿ ಆಸ್ಪತ್ರೆಗಳ ಆಂಬುಲೆನ್ಸ್​ಗಳ ಚಾಲಕರು ಆಸ್ಪತ್ರೆಯೊಳಗೆ ಬಂದು ರೋಗಿಗಳನ್ನು ಹೊರಗಡೆ ಕರೆದೊಯ್ಯುತ್ತಿದ್ದಾರೆ ಎಂದು ವಿಭಾಗಗಳ ಮುಖ್ಯಸ್ಥರು ಸಭೆಯಲ್ಲಿ ದೂರು ನೀಡಿದರು. ಈ ವೇಳೆ ಪ್ರತಿಕ್ರಿಯೆ ನೀಡಿದ ಡಿಸಿ, ಗೇಟ್ ಮುಂದೆ ಸಿಸಿ ಕ್ಯಾಮೆರಾ ಅಳವಡಿಸಿ ಅನಾವಶ್ಯಕವಾಗಿ ಖಾಸಗಿ ಆಂಬುಲೆನ್ಸ್ ಚಾಲಕರು ಒಳಗಡೆ ಸುಳಿದಾಡಿದರೆ ಎಫ್​ಐಆರ್ ದಾಖಲಿಸಬಹುದು ಎಂದು ಹೇಳಿದರು.

ಆಪರೇಷನ್ ಥಿಯೇಟರ್ ಕೊರತೆ: 70 ವರ್ಷದ ಹಳೆಯ ಕಟ್ಟಡ ಇದಾಗಿದ್ದು ಆತಂಕದಲ್ಲೇ ಹೆರಿಗೆ ಮಾಡಿಸುವ ಸ್ಥಿತಿ ಬಂದಿದೆ. 2018ರಲ್ಲಿ 351, 2019ರಲ್ಲಿ 1706 ಹಾಗೂ 2020ರ ಇಲ್ಲಿವರೆಗೆ 408 ಮೇಜರ್ ಸರ್ಜರಿ ಮಾಡಲಾಗಿದೆ. 2018ರಲ್ಲಿ 5,987, 2019ರಲ್ಲಿ 7,273 ಹಾಗೂ 2020ರ ಇಲ್ಲಿವರೆಗೆ 1,677 ಹೆರಿಗೆ ಮಾಡಿಸಿದ್ದು ಪ್ರಸ್ತುತ ಮೂರು ಓಟಿ(ಆಪರೇಷನ್ ಥಿಯೇಟರ್)ಗಳಿಗೆ ಇನ್ನೂ ಮೂರು ಓಟಿ, ಹೊಸ ಕಟ್ಟಡದ ಅವಶ್ಯಕತೆ ಇದೆ. ಸಿಬ್ಬಂದಿ ನೇಮಕಾತಿ ಮತ್ತು ಹಾಸಿಗೆಗಳನ್ನು 300ಕ್ಕೆ ಹೆಚ್ಚಿಸಬೇಕಿದೆ ಎಂದು ಪ್ರಸೂತಿ ಮತ್ತು ಹೆರಿಗೆ ವಿಭಾಗದ ಡಾ. ಪ್ರಶಾಂತ್ ಸಭೆ ಗಮನಕ್ಕೆ ತಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net