ಮೆಗಾ ಲೋಕ್ ಅದಾಲತ್ 27ರಂದು

kadalur satyanarayanacharya
Published on

ಬೀದರ್: ಜಿಲ್ಲೆಯ ಎಲ್ಲ ನ್ಯಾಯಾಲಯಗಳ ಸಂಕೀರ್ಣಗಳಲ್ಲಿ ಮಾ. 27ರಂದು ಮೆಗಾ ಲೋಕ ಅದಾಲತ್ ಆಯೋಜಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಕಾಡಲೂರ ಸತ್ಯನಾರಾಯಣಾಚಾರ್ಯ ತಿಳಿಸಿದ್ದಾರೆ.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲೆಯ ಎಲ್ಲ ತಾಲೂಕು ಕಾನೂನು ಸೇವಾ ಸಮಿತಿಗಳಿಂದ ಲೋಕ ಅದಾಲತ್ ಸಂಘಟಿಸಲಾಗಿದೆ. ಪ್ರಕರಣದ ಉಭಯ ಪಕ್ಷಗಾರರಲ್ಲಿ ರಾಜಿ ಸಂಧಾನ ಏರ್ಪಡಿಸಿ, ಆ ಪ್ರಕರಣವನ್ನು ಇತ್ಯರ್ಥಗೊಳಿಸುವುದೇ ಇದರ ಉದ್ದೇಶ. ಈ ಅದಾಲತ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಕಕ್ಷಿಗಾರರು, ವಕೀಲರು, ಬ್ಯಾಂಕ್ ಗ್ರಾಹಕರು ಮತ್ತು ಅಧಿಕಾರಿಗಳು ಭಾಗವಹಿಸಿ ತಮ್ಮ ಪ್ರಕರಣಗಳನ್ನು ಬಗೆಹರಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.

ಲೋಕ ಅದಾಲತ್ ನಲ್ಲಿ ವ್ಯಾಜ್ಯವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಹಾಗೂ ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಬಹುದು. ಯಾವುದೇ ಕೋಟ್೯ ಫೀಸ್ ಕೊಡಬೇಕಾಗಿಲ್ಲ. ಪಕ್ಷಗಾರರು ನೇರ ಭಾಗವಹಿಸಬಹುದು. ಸಂಧಾನಕಾರರು ಸೂಚಿಸುವ ಪರಿಹಾರ ತೃಪ್ತಿಯಾದಲ್ಲಿ ಮಾತ್ರ ರಾಜಿಗೆ ಒಪ್ಪಿಕೊಳ್ಳಬಹುದು. ಸಿವಿಲ್ ಪ್ರಕರಣ ಇತ್ಯರ್ಥಗೊಂಡರೆ ಅವಾಡ್೯ ಮಾಡಲಾಗುತ್ತದೆ. ಇದು ಸಾಮಾನ್ಯ ಡಿಕ್ರಿಯಷ್ಟೇ ಮಹತ್ವ ಹೊಂದಿರುತ್ತದೆ. ಪ್ರಕರಣ ರಾಜಿಯಾದಲ್ಲಿ ಶೇ.100ರಷ್ಟು ನ್ಯಾಯಾಲಯ ಶುಲ್ಕ ಹಿಂದಿರುಗಿಸಲಾಗುತ್ತದೆ. ಅದಾಲತ್ ತೀರ್ಪಿನ ವಿರುದ್ಧ ಮೇಲ್ಮನವಿಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.

ಅದಾಲತ್ ಲಾಭ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿಗಳನ್ನು ಸಂಪರ್ಕಿಸಬಹುದು. ಬೀದರ್ (08482-226116, 8971509395, 9964225217), ಔರಾದ್ (9731228169), ಬಸವಕಲ್ಯಾಣ (9902213842), ಭಾಲ್ಕಿ (9008070905) ಮತ್ತು ಹುಮನಾಬಾದ್ (9035342125)ನಲ್ಲಿ ಮಾಹಿತಿ ಇದೆ ಎಂದು ತಿಳಿಸಿದ್ದಾರೆ.

1310 ಪ್ರಕರಣ ಗುರುತು
ಮಾ. 27ರಂದು ನಡೆಯುವ ಮೆಗಾ ಅದಾಲತ್ ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಕ್ಕಾಗಿ ಜಿಲ್ಲಾದ್ಯಂತ 1310 ಪ್ರಕರಣಗಳನ್ನು ಗುರುತಿಸಲಾಗಿದೆ. ಇನ್ನೂ ಸಮಯಾವಕಾಶ ಇದ್ದು ಹೆಚ್ಚಿನ ಪ್ರಕರಣ ಗುರುತಿಸಲಾಗುವುದು. ಕಳೆದ ಡಿಸೆಂಬರ್ 19ರಂದು ಹಮ್ಮಿಕೊಂಡ ಇ-ಲೋಕ ಅದಾಲತ್ನಲ್ಲಿ 6562 ಪ್ರಕರಣ ಗುರುತಿಸಲಾಗಿತ್ತು. ಅವುಗಳ ಪೈಕಿ 4036 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ 7.67 ಕೋಟಿ ರೂ. ವ್ಯಾಜ್ಯ ಸಂಬಂಧ ರಾಜಿ ಮಾಡಲಾಗಿದೆ ಎಂದು ಸತ್ಯನಾರಾಯಾಣಾಚಾರ್ಯ ತಿಳಿಸಿದರು..

ಮೆಗಾ ಲೋಕ ಅದಾಲತ್ ನಲ್ಲಿ ಹೆಚ್ಚಿನ ಪ್ರಕರಣ ವಿಲೇವಾರಿ ಮಾಡುವ ಸಂಬಂಧ ಪ್ರತಿ ದಿನ ಸಂಜೆ 4 ಗಂಟೆಗೆ (ರಜಾ ದಿನ ಹೊರತುಪಡಿಸಿ) ನಗರದ ಎಡಿಆರ್ ಬಿಲ್ಡಿಂಗ್ ಹಾಗೂ ತಾಲೂಕಿನ ಎಲ್ಲ ನ್ಯಾಯಾಲಯಗಳಲ್ಲಿ ಪ್ರೀ ಕಾನ್ಸಿಲಿಯೇಷನ್ ಸಿಟ್ಟಿಂಗ್ ಏರ್ಪಡಿಸಲಾಗಿದೆ. ಜಾಸ್ತಿ ಜನರು ಲಾಭ ಪಡೆಯಬೇಕು.| ಕಾಡಲೂರು ಸತ್ಯನಾರಾಯಣಾಚಾರ್ಯಜಿಲ್ಲಾ ಪ್ರಧಾನ ನ್ಯಾಯಾಧೀಶ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net