

ಬೀದರ್: ಜಿಲ್ಲೆಯ ಎಲ್ಲ ನ್ಯಾಯಾಲಯ ಸಂಕೀರ್ಣದಲ್ಲಿ ಡಿ.19ರಂದು ಮೆಗಾ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಕಾಡಲೂರು ಸತ್ಯನಾರಾಯಣಾಚಾರ್ಯ ಹೇಳಿದರು.
ಯಾವುದೇ ಪ್ರಕರಣದ ಉಭಯ ಪಕ್ಷಗಾರರಲ್ಲಿ ರಾಜಿ ಸಂಧಾನ ಏರ್ಪಡಿಸುವ ಮೂಲಕ ಪ್ರಕರಣ ಇತ್ಯರ್ಥಗೊಳಿಸುವುದೇ ಮೆಗಾ ಲೋಕ ಅದಾಲತ್ ವಿಶೇಷವಾಗಿದೆ. ಇಲ್ಲಿ ವ್ಯಾಜ್ಯವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ, ಶೀಘ್ರ ಇತ್ಯರ್ಥಪಡಿಸಿಕೊಳ್ಳಬಹುದು. ಯಾವುದೇ ಕೋಟ್೯ ಶುಲ್ಕ ಕೊಡಬೇಕಿಲ್ಲ, ಪಕ್ಷಗಾರರು ನೇರವಾಗಿ ಭಾಗವಹಿಸಬಹುದು, ಸಂಧಾನಕಾರರು ಸೂಚಿಸುವ ಪರಿಹಾರ ತೃಪ್ತಿಯಾದಲ್ಲಿ ಮಾತ್ರ ರಾಜಿ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅದಾಲತ್ ನಲ್ಲಿ ವ್ಯಾಜ್ಯಪೂರ್ವ ಮತ್ತು ನ್ಯಾಯಾಲಯಗಳಲ್ಲಿ ವಿಚಾರಣೆಗಾಗಿ ಬಾಕಿ ಇರುವ ಪ್ರಕರಣಗಳು ಎಂದು ಎರಡು ವಿಧವಾಗಿ ವಿಂಗಡಿಸಲಾಗಿದೆ. ವ್ಯಾಜ್ಯಪೂರ್ವ ಪ್ರಕರಣಗಳಾದ ಚೆಕ್ ಬೌನ್ಸ್, ಬ್ಯಾಂಕ್ ವಸೂಲಿ, ಕಾರ್ಮಿಕ ವಿವಾದ, ವಿದ್ಯುತ್ ಹಾಗೂ ನೀರಿನ ಶುಲ್ಕ (ರಾಜಿ ಮಾಡಿಕೊಳ್ಳಲು ಬರಲಾರದ ಪ್ರಕರಣ ಹೊರತುಪಡಿಸಿ), ಇತರೆ ಪ್ರಕರಣ (ಕ್ರಿಮಿನಲ್ ಕಂಪೌಂಡೇಬಲ್ ಪ್ರಕರಣ, ವೈವಾಹಿಕ ಮತ್ತು ಇತರ ಸಿವಿಲ್ ವ್ಯಾಜ್ಯ) ಹಾಗೂ ನ್ಯಾಯಾಲಯಗಳಲ್ಲಿ ವಿಚಾರಣೆಗಾಗಿ ಬಾಕಿ ಇರುವ ಪ್ರಕರಣಗಳಾದ ಕ್ರಿಮಿನಲ್ ರಾಜಿಯಾಗಬಹುದಾದ ಪ್ರಕರಣ, ಚೆಕ್ ಬೌನ್ಸ್, ಬ್ಯಾಂಕ್ ವಸೂಲಿ, ಕಾರ್ಮಿಕ ವಿವಾದ, ಎಂವಿಸಿ ಪ್ರಕರಣ, ವಿದ್ಯುತ್, ನೀರಿನ ಶುಲ್ಕ ಪ್ರಕರಣ (ರಾಜಿ ಮಾಡಿಕೊಳ್ಳಲು ಬರಲಾರದ ಪ್ರಕರಣ ಹೊರತುಪಡಿಸಿ), ಎಲ್ಐಸಿ ಕೇಸ್, ಕಂದಾಯ ಇತರೆ ಸಿವಿಲ್ ಪ್ರಕರಣಗಳು ಅದಾಲತ್ ನಲ್ಲಿ ಬರಲಿವೆ ಎಂದರು.
ಕಳೆದ ಇ-ಲೋಕ ಅದಾಲತ್ ನಲ್ಲಿ 3663 ಪ್ರಕರಣಗಳನ್ನು ಗುರುತಿಸಿದ್ದು, ಅವುಗಳ ಪೈಕಿ 1655 ಪ್ರಕರ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ 4,73,94,803 ರೂ. ರಾಜಿ ಮಾಡಲಾಗಿದೆ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ ಟಿ.ಪಿ., ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಧನರಾಜ ಬಿರಾದಾರ ಇದ್ದರು.
ಮೆಗಾ ಅದಾಲತ್ ನಲ್ಲಿ ರಾಜಿ ಸಂಧಾನ ಮೂಲಕ ಇತ್ಯರ್ಥಕ್ಕಾಗಿ ಜಿಲ್ಲಾದ್ಯಂತ ಒಟ್ಟು 2954 ಪ್ರಕರಣ ಗುರುತಿಸಲಾಗಿದೆ. ಇನ್ನೂ ಸಮಯವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಕಕ್ಷಿಗಾರರು, ವಕೀಲರು, ಬ್ಯಾಂಕ್ ಗ್ರಾಹಕರು ಮತ್ತು ಅಧಿಕಾರಿಗಳು ಭಾಗವಹಿಸಿ ತಮ್ಮ ಪ್ರಕರಣ ರಾಜಿ ಸಂಧಾನ ಮೂಲಕ ಬಗೆಹರಿಸಿಕೊಳ್ಳಬಹುದು.| ಕಾಡಲೂರು ಸತ್ಯನಾರಾಯಣಾಚಾರ್ಯಜಿಲ್ಲಾ ಪ್ರಧಾನ ನ್ಯಾಯಾಧೀಶರ