ಮೆಗಾ ಮಾರುಕಟ್ಟೆಗೆ ಭಾರಿ ಬೇಡಿಕೆ

Huge demand for mega market
ಬಸವನಬಾಗೇವಾಡಿ ಪಟ್ಟಣದಲ್ಲಿರುವ ಮೆಗಾ ಮಾರುಕಟ್ಟೆ
Published on

ಬಸವನಬಾಗೇವಾಡಿ: ಸಚಿವ ಶಿವಾನಂದ ಪಾಟೀಲರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಮೆಗಾ ಮಾರುಕಟ್ಟೆಗೆ ಭಾರಿ ಬೇಡಿಕೆ ಬಂದಿದ್ದು, ಕೇವಲ 23 ಮಳಿಗೆಗಳಿಗೆ 6.16ಕೋಟಿ ರೂ. ಠೇವಣಿ ಸಂಗ್ರಹವಾಗಿದೆ.

ಮನಗೂಳಿ-ಬಿಜ್ಜಳ ಬಾರಖೇಡ-ಬೀಳಗಿ ಎರಡು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಪಟ್ಟಣದ ಹೃದಯ ಭಾಗದಲ್ಲಿ 3 ಎಕರೆ ವಿಸ್ತೀರ್ಣದಲ್ಲಿ 40 ಕೋಟಿ ರೂ. ವೆಚ್ಚದಲ್ಲಿ 133 ಮಳಿಗೆಗಳ ಮೆಗಾ ಮಾರುಕಟ್ಟೆ ನಿರ್ಮಾಣ ಕಾಮಗಾರಿಯನ್ನು 2017ರಲ್ಲಿ ಆರಂಭಿಸಲಾಗಿತ್ತು. ಈ ಕಾಮಗಾರಿ ಮುಕ್ತಾಯವಾಗಿ ಉದ್ಘಾಟನೆಗೆ ಸಜ್ಜಾಗಿದೆ.

ಸ್ಥಳೀಯ ಸಂಸ್ಥೆ ತನ್ನ ಸ್ವಂತ ಬಲದ ಮೇಲೆ ನಿಲ್ಲಬೇಕೆಂಬ ಉದ್ದೇಶದಿಂದ ವಿವಿಧ 4 ಇಲಾಖೆಗಳ 3 ಎಕರೆ ಜಾಗವನ್ನು ಪುರಸಭೆಗೆ ಹಸ್ತಾಂತರ ಮಾಡಿಕೊಂಡು ಆ ಜಾಗದಲ್ಲಿ ಮೆಗಾ ಮಾರುಕಟ್ಟೆ ನಿರ್ಮಿಸಿ ಅದರಿಂದ ಬರುವ ಬಾಡಿಗೆಯಲ್ಲಿ ಪಟ್ಟಣದ ಜನತೆಗೆ ಮೂಲ ಸೌಲಭ್ಯಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಸಚಿವ ಶಿವಾನಂದ ಪಾಟೀಲ 2004ರಲ್ಲಿ ಈ ಯೋಜನೆಯ ನೀಲಿನಕ್ಷೆ ತಯಾರಿಸಿದ್ದರು. ಅವರ ಕನಸಿನ ಮೆಗಾ ಮಾರುಕಟ್ಟೆಯ ಕನಸು ಇಂದು ನನಸಾಗುವ ಜತೆಗೆ ಯಾರೂ ನಿರೀಕ್ಷೆ ಮಾಡದಷ್ಟು ಬೇಡಿಕೆ ಇಲ್ಲಿನ ಮಳಿಗೆಗಳಿಗೆ ಬಂದಿದೆ.

ಸಿದ್ಧೇಶ್ವರ ಶ್ರೀಗಳಿಂದ ಮೆಚ್ಚುಗೆ: ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಮಾರುಕಟ್ಟೆಯನ್ನು ವೀಕ್ಷಿಸಿ ಜನತೆ ಮತ್ತು ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡುವ ರೀತಿಯಲ್ಲಿ ಇಂತಹ ಕಾರ್ಯ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಮೆಗಾ ಮಾರುಕಟ್ಟೆ ಸೌಲಭ್ಯಗಳು: ಮಾರುಕಟ್ಟೆಯ ಕೆಳ ಮಹಡಿಯಲ್ಲಿ ಉದ್ಯಾನವನ, 1ನೇ ಮಹಡಿಯಲ್ಲಿ ವಿದ್ಯುತ್ ದೀಪಗಳು ಹಾಗೂ ಮಾರುಕಟ್ಟೆ ಸುತ್ತಲೂ ಅಲಂಕಾರಿಕ ಗಿಡಗಳು ಹಾಗೂ ಕಾರಂಜಿ ವ್ಯವಸ್ಥೆ ಸೇರಿ ಅನೇಕ ಸೌಲಭ್ಯ ಒದಗಿಸಿ ಹೈಟೆಕ್ ಸ್ಪರ್ಶ ನೀಡಲಾಗಿದೆ.

ಗುರಿ ಮತ್ತು ಶ್ರಮವಿದ್ದರೆ ಅದಕ್ಕೆ ಪ್ರತಿಫಲ ಖಂಡಿತ ಸಿಗುತ್ತದೆ. ಈ ಮೆಗಾ ಮಾರುಕಟ್ಟೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸಣ್ಣ ಪಟ್ಟಣದಲ್ಲಿ ಇಂತಹ ಕಾರ್ಯ ಸಾಧ್ಯವೇ ಎಂಬ ಮಾತುಗಳು ಕೇಳಿಬಂದವು. ಈಗ ಆ ಮಾತು ಸುಳ್ಳಾಗಿ ಶ್ರಮಕ್ಕೆ ಫಲ ದೊರೆತಿದೆ.
ಶಿವಾನಂದ ಪಾಟೀಲ, ಜವಳಿ, ಕೃಷಿ ಮಾರುಕಟ್ಟೆ ಸಚಿವರು
ಮಹಾನ್ ನಗರಗಳಲ್ಲಿ ನೋಡುತ್ತಿದ್ದ ಇಂತಹ ಮಾರುಕಟ್ಟೆ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ಸಂಗತಿ. ಯಾರೂ ನಿರೀಕ್ಷೆ ಮಾಡದಷ್ಟು ಮೆಗಾ ಮಾರುಕಟ್ಟೆಗೆ ಬೇಡಿಕೆ ಸಿಕ್ಕಿದೆ. ಬಸವನಬಾಗೇವಾಡಿ ಮುಂದೆ ವಾಣಿಜ್ಯ ನಗರವಾಗಿ ಬೆಳೆಯಲು ಇದು ಅನುಕೂಲ ಕಲ್ಪಿಸಲಿದೆ.
ಶಿವಪ್ರಕಾಶ ಶಿವಾಚಾರ್ಯರು, ಹಿರೇಮಠ
ಸಚಿವ ಶಿವಾನಂದ ಪಾಟೀಲರ ನಿರ್ದೇಶನದಂತೆ ಹರಾಜು ಪ್ರಕ್ರಿಯೆ ನಡೆಸಲಾಗಿದೆ. ಈಗಾಗಲೇ 23 ಮಳಿಗೆಗಳ ಹರಾಜು ಪೂರ್ಣಗೊಂಡಿದೆ. ಉಳಿದ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ಆಗಸ್ಟ್ 22 ಹಾಗೂ 23ರಂದು ಮುಂದುವರಿಸಲಾಗುವುದು.
ಶಿವಾನಂದ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net