

ಇಂಡಿ: ಮೆಗಾ ಮಾರುಕಟ್ಟೆ ಹರಾಜು ಟೆಂಡರ್ ಪ್ರಕ್ರಿಯೆ ವಿರೋಧಿಸಿ ಸ್ಥಳೀಯ ಪುರಸಭೆ ಎದುರು ಗುರುವಾರ ಪುರಸಭೆ ಸದಸ್ಯರು, ಅಂಗಡಿಕಾರರು, ವ್ಯಾಪಾರಸ್ಥರು, ವಿವಿಧ ಸಂಘಟನೆಯ ಮುಖ್ಯಸ್ಥರು ಹಾಗೂ ಸಾರ್ವಜನಿಕರು ಪುರಸಭೆ ಆಡಳಿತಾಧಿಕಾರಿ ಹಾಗೂ ಮುಖ್ಯಾಧಿಕಾರಿ ವಿರುದ್ಧ ಪ್ರತಿಭಟನೆ ನಡೆಸಿದರು.
ಪುರಸಭೆ ಸದಸ್ಯರಾದ ಅನೀಲಗೌಡ ಬಿರಾದಾರ, ದೇವೇಂದ್ರ ಕುಂಬಾರ, ಬುದ್ದುಗೌಡ ಪಾಟೀಲ ಮಾತನಾಡಿ, ಈ ಟೆಂಡರ್‌ನ್ನು ಪುರಸಭೆ ಸದಸ್ಯರ ಗಮನಕ್ಕೆ ತರದೇ ಕರೆಯಲಾಗಿದೆ. ಪುರಸಭೆ ಮುಖ್ಯಾಧಿಕಾರಿ ಸಿದ್ಧಪಡಿಸಿದ ಯೋಜನೆಯಂತೆ ಮೇಲಾಧಿಕಾರಿಗಳು ಅನುಮೋದನೆ ನೀಡಿರುವ ಟೆಂಡರನ್ನು ಸ್ಥಳೀಯ ಪುರಸಭೆ ಸದಸ್ಯರ ಗಮನಕ್ಕೆ ತರದೆ ಟೆಂಡರ ಪ್ರಕ್ರಿಯೆ ಹೇಗೆ ಮಾಡಿದ್ದಿರಿ ? ನಾವು ಪುರಸಭೆ ಸದಸ್ಯರು ಇಲ್ಲವೋ ಹೇಳಿ ಎಂದು ಆಡಳಿತಧಿಕಾರಿ ವಿರುದ್ಧ ಹರಿಹಾಯ್ದರು.
ಪಟ್ಟಣದಲ್ಲಿ ರಸ್ತೆ ಅಗಲೀಕರಣ ಮಾಡುವಾಗ ಅಂಗಡಿ ಕಳೆದುಕೊಂಡವರಿಗೆ ಮೆಗಾ ಮಾರುಕಟ್ಟೆಯಲ್ಲಿ ಅಂಗಡಿ ಕೊಡುವುದಾಗಿ ಪುರಸಭೆಯಿಂದ ಭರವಸೆ ನೀಡಲಾಗಿತ್ತು. ಮತ್ತು ಹರಾಜಿನಲ್ಲಿ ಐದು ಲಕ್ಷದ ವರೆಗೆ ಡಿಪಾಜಿಟ್ ಮತ್ತು ಒಂಬತ್ತು ಸಾವಿರ ರೂ. ಬಾಡಿಗೆ ಮಾಡಿರುವುದರಿಂದ ಬಡ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತದೆ. ಎಸ್‌ಸಿ, ಎಸ್‌ಟಿ, ಅಂಗವಿಕಲ, ಮಾಜಿ ಸೈನಿಕರಿಗೆ ಕಾಯ್ದಿಸಿದ ಮಳಿಗೆಗಳಿಗೂ ಅಧಿಕ ಬಾಡಿಗೆ ಮಾಡಲಾಗಿದೆ ಎಂದು ಆರೋಪಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಉಪವಿಬಾಗಾಧಿಕಾರಿ ಮತ್ತು ಪುರಸಭೆ ಆಡಳಿತಾಧಿಕಾರಿ ಅಬೀದ್ ಗದ್ಯಾಳ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಮಾತನಾಡಿ, ಟೆಂಡರ್ ಪ್ರಕ್ರಿಯೆ ಈ ಮೊದಲೇ ಆಗಿತ್ತು. ಈ ಮೊದಲಿನ ಪುರಸಭೆ ಮುಖ್ಯಾಧಿಕಾರಿ ನೂರು ಮಳಿಗೆಗಳ ಕೆಲಸ ಮುಗಿದಿದ್ದು, ಟೆಂಡರ್ ಪ್ರಕ್ರಿಯೆಗೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದರು. ಮೇಲಧಿಕಾರಿಗಳು ಟೆಂಡರ್‌ಗೆ ಅನುಮತಿ ನೀಡಿದ್ದರು. ಸರ್ಕಾರದ ಮಾರ್ಗಸೂಚಿ ಪ್ರಕಾರ ಟೆಂಡರ್ ಕರೆಯಲಾಗಿದೆ. ಆದರೆ ಈ ಮೊದಲಿದ್ದ ಮುಖ್ಯಾಧಿಕಾರಿ ಸದಸ್ಯರ ಗಮನಕ್ಕೆ ತರದೇ ಇರುವುದು ನಮ್ಮ ಗಮನಕ್ಕಿಲ್ಲ. ಕಾರಣ ಟೆಂಡರ್ ಪ್ರಕ್ರಿಯೆ ರದ್ದು ಮಾಡಿ ಮಂಗಳವಾರ ಸಾರ್ವಜನಿಕರ, ರಸ್ತೆ ಅಗಲೀಕರಣದಲ್ಲಿ ಅಂಗಡಿ ಕಳೆದುಕೊಂಡವರ ಮತ್ತು ಪುರಸಭೆ ಸದಸ್ಯರ ಸಮ್ಮುಖದಲ್ಲಿ ಚರ್ಚಿಸಿ ನಿರ್ಣಯಿಸುವದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯರಾದ ಸೈಪನ ಪವಾರ, ತಿಪ್ಪಣ್ಣ ಉಟಗಿ, ಜಯರಾಮ ರಾಠೋಡ, ಯಲ್ಲಪ್ಪ ಹದರಿ, ಪಿಂಟು ಪವಾರ, ವಿಜಯ ಮೂರಮನ್, ವ್ಯಾಪಾರಸ್ಥರಾದ ಶ್ರೀಧರದ ಕ್ಷೇತ್ರಿ, ಸಂಜು ದಶವಂತ, ರಾಚು ಬಡಿಗೇರ, ಅಪ್ಪು ಪವಾರ, ಅಶೋಕ ಅಕಲಾದಿ, ಪ್ರಶಾಂತ ಗೌಳಿ, ಸುನೀಲಗೌಡ ಬಿರಾದಾರ, ಮಲ್ಲಿಕಾರ್ಜುನ ವಾಲಿಕಾರ, ದತ್ತಾ ಬಂಡೆನವರ, ಪ್ರವೀಣ ಮಠ, ನಾಗೇಶ ದಶವಂತ, ಚಂದ್ರಶೇಖರ ಹೊಸಮನಿ, ಶಿವಾನಂದ ದಶವಂತ, ವಿದ್ಯಾಸಾಗರ ಧನಶೆಟ್ಟಿ, ಸಂತೋಷ ಗವಳಿ, ಎಸ್.ಆರ್. ನಾಯಕೊಡಿ, ಎಸ್.ಎಂ. ಮಕನಾದಾರ, ಸಿದ್ದು ದುಲೆ, ಶಿವಾನಂದ ಖೇಡಗಿ, ಚಂದನ ಧನಪಾಲ ಇತರರಿದ್ದರು.