ಮೆಗಾ ಫುಡ್ ಫೇವರಿಚ್ ಕಂಪನಿಯಿಂದ ಕೆರೆ ಒತ್ತುವರಿ

IMG-20241023-WA0223
ಶಾಸಕ ಎಚ್.ಟಿ.ಮಂಜು
Published on

ಕೆ.ಆರ್.ಪೇಟೆ: ತಾಲೂಕಿನ ಬಣ್ಣೇನಹಳ್ಳಿ ಬಳಿಯಿರುವ ಮೆಗಾ ಫುಡ್ ಫೇವರಿಚ್ ಕಂಪನಿ ಕೆರೆ ಒತ್ತುವರಿ ಮಾಡಿ ಭೂ ಕಬಳಿಕೆ ಮಾಡಿರುವುದಾಗಿ ಶಾಸಕ ಎಚ್.ಟಿ.ಮಂಜು ಆರೋಪಿಸಿದರು.

ಈ ಬಗ್ಗೆ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆದು ಮನವಿ ಮಾಡಿದ್ದರೂ ಯಾವುದೇ ಕ್ರಮ ವಹಿಸುತ್ತಿಲ್ಲ. ಕಂಪನಿಯ ಜನ ವಿರೋಧಿ ಕೃತ್ಯಗಳ ವಿರುದ್ಧ ಜಿಲ್ಲಾಡಳಿತ ಕ್ರಮ ಜರುಗಿಸದಿದ್ದರೆ ರೈತರೊಂದಿಗೆ ಸೇರಿ ಬೀದಿ ಹೋರಾಟಕ್ಕಿಳಿಯುವುದಾಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ತಾಲೂಕಿನ ರೈತ ಸಮುದಾಯಕ್ಕೆ ಮತ್ತು ನಿರುದ್ಯೋಗಿ ಯುವಕರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ಕೆ.ಐ.ಎ.ಡಿ.ಬಿ ಮೂಲಕ ರೈತರಿಂದ ಸ್ವಾಧೀನಪಡಿಸಿಕೊಂಡಿದ್ದ ಸುಮಾರು 300 ಕ್ಕೂ ಹೆಚ್ಚು ಎಕರೆ ಪ್ರದೇಶದ ಭೂಮಿಯನ್ನು ಫೇವರಿಚ್ ಕಂಪನಿಗೆ ಪ್ರತಿ ಎಕರೆಗೆ 6 ಲಕ್ಷ ರೂ.ಗಳಂತೆ ನೀಡಿದೆ. ನೆಪ ಮಾತ್ರಕ್ಕೆ ಒಂದೆರಡು ಆಹಾರ ತಯಾರಿಕಾ ಘಟಕಗಳನ್ನು ಪ್ರಾರಂಭಿಸಿರುವ ಫೇವರಿಚ್ ಕಂಪನಿ ಉಳಿದ ಭೂಮಿಯನ್ನು ಪ್ರತಿ ಎಕರೆಗೆ 2-3 ಕೋಟಿ ರೂ.ನಂತೆ ಇತರರಿಗೆ ಮಾರಾಟ ಮಾಡುತ್ತ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದೆ. ಸದರಿ ಪ್ರದೇಶದಲ್ಲಿ ಆರಂಭಿಸಲಾಗಿರುವ ಆಹಾರ ಉತ್ಪನ್ನ ಘಟಕಗಳನ್ನು ಹೊರತುಪಡಿಸಿ ಉಳಿದಿರುವ ಖಾಲಿ ಜಾಗವನ್ನು ರೈತರಿಗೆ ವಾಪಸ್ ನೀಡಬೇಕು ಎಂದು ಆಗ್ರಹಿಸಿದರು.

ಸ್ಥಳೀಯರಿಗೆ ಉದ್ಯೋಗ ನೀಡಿ

ಫೇವರಿಚ್ ಕಂಪನಿ ಆರಂಭಿಸಿರುವ ಉತ್ಪನ್ನ ಘಟಕಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ಉನ್ನತ ಹುದ್ದೆಗಳನ್ನು ಹೊರ ರಾಜ್ಯದವರಿಗೆ ನೀಡಿ ಸ್ಥಳೀಯ ಯುವಕರಿಗೆ ಮೂಟೆ ಹೊರುವ, ಗೇಟ್ ಕಾಯುವ, ಕಸ ಗುಡಿಸುವ ಕೆಲಸ ಮಾತ್ರ ನೀಡುತ್ತಿದೆಯಲ್ಲದೆ ಇವರಿಗೆ ನಿಯಮಾನುಸಾರ ಕನಿಷ್ಠ ವೇತನ ನೀಡದೆ ಶೋಷಿಸುತ್ತಿದೆ. ಸ್ಥಳೀಯ ಯುವಕರು ಉದ್ಯೋಗ ಬಿಟ್ಟು ಹೋಗುವಂತೆ ಮಾಡಲು ಕಂಪನಿ ತನ್ನ ಮೇಲಧಿಕಾರಿಗಳ ಮೂಲಕ ಅನಗತ್ಯ ಒತ್ತಡ ಹಾಕುತ್ತಿದೆ. ಕಂಪನಿಯ ಉದ್ಯೋಗಗಳಲ್ಲಿ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಸಿಂಹಪಾಲು ನೀಡುವಂತೆ ಶಾಸಕರು ಆಗ್ರಹಿಸಿದರು.

ಕೆರೆ ಮತ್ತು ರಸ್ತೆ ಒತ್ತುವರಿ

ಫೇವರಿಚ್ ಕಂಪನಿಯ ವ್ಯಾಪ್ತಿಗೆ ಸೇರಿದಂತೆ ರೈತರು ಉಪಯೋಗಿಸುವ ಕೆರೆಯೊಂದು ಇದೆ. ಸರ್ವೇ ನಂ 21 ರಲ್ಲಿರುವ ಸಾರ್ವಜನಿಕರ ಕರೆಯ 1.38 ಎಕರೆ ಪ್ರದೇಶದಷ್ಟು ಜಾಗವನ್ನು ಫೇವರಿಚ್ ಕಂಪನಿ ಒತ್ತುವರಿ ಮಾಡಿಕೊಂಡಿದೆ. ಜತೆಗೆ ಬಣ್ಣೇನಹಳ್ಳಿಗೆ ಹೋಗುವ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರ ರಸ್ತೆಗೆ ತಡೆಗೋಡೆಯನ್ನು ಕಟ್ಟಿ ರೈತರ ಸಂಚಾರಕ್ಕೆ ಅಡ್ಡಿಪಡಿಸಿದೆ. ಕೆರೆಗಳ ಸಂರಕ್ಷಣೆ ಜಿಲ್ಲಾಡಳಿತದ ಜವಾಬ್ದಾರಿ. ಕೆರೆ ಒತ್ತುವರಿಯ ಬಗ್ಗೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಲಿಖಿತ ದೂರು ನೀಡಿದ್ದರೂ ಇದುವರೆಗೂ ಒತ್ತುವರಿ ತೆರವುಗೊಳಿಸುವ ಕೆಲಸಕ್ಕೆ ಮುಂದಾಗಿಲ್ಲ ಎಂದು ದೂರಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕಿರಾಂ, ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್ ಸುದ್ದಿಗೋಷ್ಠಿಯಲ್ಲಿದ್ದರು.

23ಞಡಿಠಿ-01 ಮೆಗಾ ಫೆವರಿಚ್ ಕಂಪನಿ ಕೆರೆ ಒತ್ತುವರಿ ಫೋಟೋ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net