

ಚಿತ್ರದುರ್ಗ: ತಾಲೂಕಿನ ಮಾಡನಾಯಕನಹಳ್ಳಿ ಗ್ರಾಮದ ಸರ್ಕಾರಿ ಜಾಗದಲ್ಲಿ ಖಾಸಗಿ ವಿಂಡ್ ಪವರ್ ಲಿಮಿಟೆಡ್ ಕಂಪನಿ ಅಳವಡಿಸಿರುವ ಪವನಯಂತ್ರಗಳಿಂದಾಗಿ ಸುತ್ತಮುತ್ತ ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಬೆಳೆಗೆ ತೀವ್ರ ಹಾನಿ ಉಂಟಾಗಿರುವುದನ್ನು ವಿರೋಧಿಸಿ ರೈತರು ತಹಸೀಲ್ದಾರ್ ಡಾ.ನಾಗವೇಣಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಮೆಕ್ಕೆಜೋಳ ಬೆಳೆ ಹಾನಿ ಸಂಬಂಧ ಖಾಸಗಿ ಕಂಪನಿಯ ವ್ಯವಸ್ಥಾಪಕರಿಗೆ ಅನೇಕ ಬಾರಿ ಮನವರಿಕೆ ಮಾಡಿದ್ದರೂ ರೈತರ ಕಷ್ಟ ಆಲಿಸುತ್ತಿಲ್ಲ. ಬೆಳೆ ಹಾನಿಗೂ, ಪವನಯಂತ್ರಗಳಿಗೂ ಯಾವ ಸಂಬಂಧವಿಲ್ಲ. ಕಂದಾಯ ಇಲಾಖೆ ವಿಚಾರಿಸಿ ಎಂಬ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ದೂರಿದರು. ಕೂಡಲೇ ಬೆಳೆ ನಷ್ಟ ಭರ್ತಿಗೆ ಕ್ರಮವಹಿಸಿ ಎಂದು ಕೋರಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮುಖಂಡರಾದ ಹನುಮಂತಪ್ಪ, ಯತಿರಾಜ್, ಚಂದ್ರಪ್ಪ, ಕೊಲ್ಲಯ್ಯ ಇತರರಿದ್ದರು.