

ಹಿರೇಕೆರೂರ: ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೆ.ಎಸ್. ಪುಟ್ಟಣ್ಣಯ್ಯ ಬಣದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಿರೇಕೆರೂರ ಮತ್ತು ರಟ್ಟಿಹಳ್ಳಿ ತಾಲೂಕು ಘಟಕದಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ರಿಯಾಜುದ್ದೀನ್ ಬಾಗವಾನ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಮೆಕ್ಕೆಜೋಳ ಬೆಲೆ ಕುಸಿತದಿಂದ ರೈತರು ಭಾರಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಎಂಎಸ್ಪಿ ಬೆಲೆಯಲ್ಲಿ 1860 ರೂ. ನಿಗದಿಪಡಿಸಿದ್ದು, ಮಾರುಕಟ್ಟೆಯಲ್ಲಿ ಮೆಕ್ಕೆಜೋಳ 1000 ರೂ.ದಿಂದ 1200 ರೂ. ವರೆಗೆ ಮಾರಾಟವಾಗುತ್ತಿದೆ. ಇದರಿಂದ ರೈತರಿಗೆ 600 ರೂ. ದಿಂದ 800 ರೂ. ವರೆಗೆ ನಷ್ಟವಾಗುತ್ತಿದೆ. ಸರ್ಕಾರ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸದಂತೆ ಸುಗ್ರೀವಾಜ್ಞೆ ಹೊರಡಿಸಿ ರೈತರ ರಕ್ಷಣೆ ಮಾಡಬೇಕು. 2016-17ನೇ ಸಾಲಿನ ಬೆಳೆ ವಿಮೆ ಹಣ ಬಿಡುಗಡೆ ಮಾಡಬೇಕು. 2019-20ನೇ ಸಾಲಿನ ಬೆಳೆ ವಿಮೆ ಹಣ ಜಿಲ್ಲೆಗೆ 176 ಕೋಟಿ ರೂ. ಮಂಜೂರಾಗಿದೆ. ಆದರೆ, ಯಾವ ತಾಲೂಕಿಗೆ ಎಷ್ಟು ಬೆಳೆ ವಿಮೆ ಮಂಜೂರಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿದರು.
ರೈತ ಸಂಘದ ತಾಲೂಕಾಧ್ಯಕ್ಷ ಪ್ರಭುಗೌಡ ಪ್ಯಾಟಿ, ಪದಾಧಿಕಾರಿಗಳಾದ ಶಂಕ್ರಪ್ಪ ಶಿರಗಂಬಿ, ಶಾಂತನಗೌಡ ಪಾಟೀಲ, ಗಂಗನಗೌಡ ಮುದಿಗೌಡ್ರ, ಮಹ್ಮದ್ಗೌಸ್ ಪಾಟೀಲ, ಶಂಭು ಮುತ್ತಗಿ, ಶಿವಾನಂದಯ್ಯ ಹಳ್ಳೂರಮಠ, ಶಂಕ್ರಗೌಡ ಮಕ್ಕಳ್ಳಿ, ಕರಬಸಪ್ಪ ಬಸಾಪುರ, ಮೌನೇಶ ನರಸಾಪುರ, ಕಾಮಾಕ್ಷಿ ರೇವಣಕರ, ನವೀನ ಹುಲ್ಲತ್ತಿ, ನಾಗರಾಜ ಮಳೂರ, ವಿವಿಧ ಗ್ರಾಮಗಳ ರೈತ ಮುಖಂಡರು ಇದ್ದರು.