ಮೃತರ ವರದಿ ಆಧರಿಸಿ ಕ್ರಮ-ಪರಿಹಾರ

oplus_1048576
oplus_1048576
Published on

ಸಿಂಧನೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗಿ ಬಳಿಕ ಅನಾರೋಗ್ಯದಿಂದಾಗಿ ರಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟ ಮೂವರು ಬಾಣಂತಿಯರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಣಂತಿಯರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದೆ. ಈ ವರದಿ ಆಧರಿಸಿ ಕ್ರಮವಹಿಸಲಾಗುವುದು. ವರದಿ ಬರುವರೆಗೆ ಏನನ್ನೂ ಹೇಳಲು ಬರುವದಿಲ್ಲವೆಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ತಿಳಿಸಿದರು.

ನಗರದ ಸಾರ್ವಜನಿಕ ಆಸ್ಪತ್ರೆಗೆ ಭಾನುವಾರ ಸಂಜೆ ಭೇಟಿ ನೀಡಿ, ಕಳೆದ ವಾರದಿಂದ ಅನಿರ್ದಿಷ್ಟಾವಧಿ ಧರಣಿ ಕೈಗೊಂಡಿದ್ದ ನಮ್ಮ ಕರ್ನಾಟಕ ಸೇನೆ ಸಂಘಟನೆ ಪ್ರಮುಖರೊಂದಿಗೆ ಚರ್ಚಿಸಿ ನಂತರ ವೈದ್ಯರೊಂದಿಗೆ ಸಭೆ ನಡೆಸಿ ಸುದ್ದಿಗಾರೊಂದಿಗೆ ಮಾತನಾಡಿದರು. ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣ ಸಂಬಂಧ ಸಿಎಂ ವಿಶೇಷ ಸಮಿತಿ ರಚಿಸಿದ್ದಾರೆ. ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಯುತ್ತಿದೆ ಎಂದರು.

ಸಿಂಧನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಬಾಣಂತಿಯರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದಕ್ಕೆ ವೈದ್ಯರ ಕರ್ತವ್ಯಲೋಪ ಕಾರಣ ಎಂದು ಸಂಘಟನೆಯವರು ಹೇಳುತ್ತಿದ್ದಾರೆ. ವರದಿ ಆಧರಿಸಿ ಪರಿಹಾರಕ್ಕೆ ವ್ಯವಸ್ಥೆ ಮಾಡಲಾಗುವುದು. ಸಿಂಧನೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ತಿಂಗಳಿಗೆ 300 ಕ್ಕಿಂತ ಹೆಚ್ಚು ಹೆರಿಗೆ ಮಾಡಿರುವ ಉದಾಹರಣೆಗಳಿವೆ. ಇದುವರೆಗೆ ಯಾವುದೇ ಸಮಸ್ಯೆ ಆಗಿಲ್ಲ. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದೆ ಇಂಥ ಘಟನೆಗಳು ನಡೆಯದಂತೆ ಎಚ್ಚರ ವಹಿಸಲು ಹೇಳಲಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡಲು ತಿಳಿಸಲಾಗಿದೆ ಎಂದು ಸಚಿವ ಶರಣಪ್ರಕಾಶ ಪಾಟೀಲ್ ತಿಳಿಸಿದರು.

ಶಾಸಕರಾದ ಹಂಪನಗೌಡ ಬಾದರ್ಲಿ, ಆರ್.ಬಸನಗೌಡ ತುರ್ವಿಹಾಳ, ಎಂಎಲ್‌ಸಿ ಬಸನಗೌಡ ಬಾದರ್ಲಿ, ಜಿಲ್ಲಾಧಿಕಾರಿ ಕೆ.ನಿತೀಶ್, ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ, ತಹಸೀಲ್ದಾರ್ ಅರುಣ್ ದೇಸಾಯಿ, ಡಿಎಚ್‌ಒ ಡಾ.ಸುರೇಂದ್ರಬಾಬು, ತಾಲೂಕು ಆರೋಗ್ಯಾಧಿಕಾರಿ ಡಾ.ಅಯ್ಯನಗೌಡ ಪಾಟೀಲ್, ಮುಖ್ಯವೈದ್ಯಾಧಿಕಾರಿ ಡಾ.ನಾಗರಾಜ ಕಾಟ್ವಾ, ಡಾ.ಹನುಮಂತರಡ್ಡಿ ದೇಸಾಯಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net