

ಚಾಮರಾಜನಗರ: ತಾಲೂಕಿನ ಬಾಗಳಿ ಗ್ರಾಮದಲ್ಲಿ ಮಳೆಯಿಂದಾಗಿ ಗೋಡೆ ಕುಸಿದು ಮೃತಪಟ್ಟಿದ್ದ ಚಂದ್ರನಾಯಕ ಎಂಬುವವರ ಕುಟುಂಬಸ್ಥರಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಶನಿವಾರ ಪರಿಹಾರವನ್ನು ವಿತರಣೆ ಮಾಡಿದರು.
ತಾಲೂಕಿನ ಸಂತೇಮರಹಳ್ಳಿಯಲ್ಲಿರುವ ಶಾಸಕರ ಕಚೇರಿ ಮುಂಭಾಗ ಮೃತ ಚಂದ್ರನಾಯಕ ಅವರ ಪತ್ನಿ ಕಾವೇರಿ ಅವರಿಗೆ ಪ್ರಕೃತಿ ವಿಕೋಪ ಅನುದಾನದಡಿ 6.210 ಲಕ್ಷ ರೂ. ಚೆಕ್‌ಅನ್ನು ವಿತರಿಸಿದರು. ಈ ಸಂದರ್ಭದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ನೊಂದ ಕುಟುಂಬಕ್ಕೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಈಗಾಗಲೇ ಚಂದ್ರನಾಯಕ ಅವರ ಪತ್ನಿ ಖಾತೆಗೆ ಪರಿಹಾರದ ಹಣವನ್ನು ಆನ್‌ಲೈನ್ ಮೂಲಕ ಜಮಾ ಮಾಡಲಾಗಿತ್ತು. ಅದರ ಆದೇಶ ಪತ್ರವನ್ನು ವಿತರಿಸಲಾಗುತ್ತಿದೆ. ಬರುವ ಪರಿಹಾರದ ಹಣವನ್ನು ಬ್ಯಾಂಕ್‌ನಲ್ಲಿ ಎಫ್‌ಡಿ ಮಾಡಿ ಜೀವನ ನಿರ್ವಹಣೆಗೆ ಸಹಾಯವಾಗುತ್ತದೆ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಚಾಮುಲ್ ನಾಮನಿರ್ದೇಶಿತ ಸದಸ್ಯ ಕಮರವಾಡಿ ರೇವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಮುಖಂಡರಾದ ಕಂದಳ್ಳಿ ನಂಜುಂಡಸ್ವಾಮಿ, ದೇಮಹಳ್ಳಿ ಶಿವಕುಮಾರ್, ತಹಸೀಲ್ದಾರ್ ಗಿರಿಜಾ, ಕಂದಾಯ ಪರಿವೀಕ್ಷಕ ಸತೀಶ್ ಹಾಗೂ ಹಲವು ಮುಖಂಡರು ಹಾಜರಿದ್ದರು.