

ಶಿರಹಟ್ಟಿ: ತಾಲೂಕಿನ ಕಡಕೊಳದ ಹೊರವಲಯದಲ್ಲಿ ಸಿಡಿಲು ಬಡಿದು ಮೂವರು ಮೃತಪಟ್ಟ ಹಿನ್ನೆಲೆಯಲ್ಲಿ ಶಾಸಕ ರಾಮಣ್ಣ ಲಮಾಣಿ ಘಟನಾ ಸ್ಥಳಕ್ಕೆ ಶನಿವಾರ ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸ್ಥಳದಲ್ಲಿದ್ದ ತಹಸೀಲ್ದಾರ್ ಜೆ.ಬಿ. ಮಜ್ಜಗಿ ಅವರಿಗೆ ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡುವ ಸಂಬಂಧ ಗಮನ ಸೆಳೆದರು. ಜಿಲ್ಲಾಧಿಕಾರಿ ಜತೆಗೆ ಮಾತನಾಡಿ ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ತ್ವರಿತವಾಗಿ ಮಂಜೂರು ಮಾಡುವ ಜತೆಗೆ ಗಾಯಾಳುಗಳಿಗೂ ಪರಿಹಾರ ನೀಡಲು ಆದೇಶಿಸಿದರು. ಸಿಪಿಐ ವಿಕಾಸ ಲಮಾಣಿ, ತಾಪಂ ಇಒ ಡಾ. ಎನ್.ಎಚ್. ಓಲೇಕಾರ, ಪಿಎಸ್ಐ ನವೀನ ಜಕ್ಕಲಿ, ತಾಪಂ ಸದಸ್ಯ ತಿಪ್ಪಣ್ಣ ಕೊಂಚಿಗೇರಿ, ಫಕೀರೇಶ ರಟ್ಟಿಹಳ್ಳಿ, ನಾಗರಾಜ ಲಕ್ಕುಂಡಿ, ಜಾನು ಲಮಾಣಿ, ಮಹೇಶ ಲಮಾಣಿ ಇತರರಿದ್ದರು.
ಸಿಡಿಲಿಗೆ ತೆಂಗಿನ ಗಿಡ ಭಸ್ಮ: ಮುಂಡರಗಿ: ಸಿಡಿಲು ಬಡಿದು ತೆಂಗಿನ ಗಿಡಕ್ಕೆ ಬೆಂಕಿ ಹೊತ್ತಿ ಧಗಧಗನೆ ಉರಿದ ಘಟನೆ ತಾಲೂಕಿನ ಡೋಣಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ. ಡೋಣಿಯ ಮಲ್ಲಪ್ಪ ಕಡಕೋಳ ಅವರ ಮನೆ ಪಕ್ಕದ ತೆಂಗಿನ ಗಿಡಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ಕೆಲಕಾಲ ಜನರಲ್ಲಿ ಆತಂಕ ಮನೆ ಮಾಡಿತ್ತು. ತೆಂಗಿನಗಿಡದ ಕೆಳಗಡೆಯೇ ದನಕರುಗಳನ್ನು ಕಟ್ಟಲಾಗಿತ್ತು. ಆದರೆ, ಅಪಾಯ ಸಂಭವಿಸಿಲ್ಲ. ಕೆಲವರು ತೆಂಗಿನ ಗಿಡಕ್ಕೆ ಏಣಿ ಇಟ್ಟು ನೀರು ಸಿಂಪಡಿಸುವ ಮೂಲಕ ಬೆಂಕಿ ನಂದಿಸಲು ಹರಸಾಹಸಪಟ್ಟರು. ಸ್ವಲ್ಪ ಸಮಯದ ನಂತರ ಮಳೆ ಸುರಿಯಿತು. ಆದರೆ, ಅಷ್ಟರಲ್ಲೇ ಅರ್ಧದಷ್ಟು ಗಿಡ ಸುಟ್ಟಿತ್ತು. ಲಕ್ಷ್ಮೇಶ್ವರದ ಇಟಗಿ ಬಸವೇಶ್ವರ ದೇವಸ್ಥಾನ ಮುಂದಿರುವ ತೆಂಗಿನ ಮರಕ್ಕೂ ಬೆಂಕಿ ಬಿದ್ದಿತ್ತು. ಕೂಡಲೆ ಸ್ಥಳೀಯರು ಬೆಂಕಿ ನಂದಿಸಿದರು.
ಮಳೆ ಅಬ್ಬರಕ್ಕೆ ಧರೆಗುರುಳಿದ ಆಲದ ಮರ: ಶುಕ್ರವಾರ ರಾತ್ರಿ ಗುಡುಗು-ಸಿಡಿಲು-ಗಾಳಿಯಿಂದ ಕೂಡಿದ ಅಬ್ಬರದ ಮಳೆಯಿಂದಾಗಿ ಲಕ್ಷ್ಮೇಶ್ವರ ಪಟ್ಟಣದ ಹಳ್ಳದಕೇರಿ ಓಣಿಯಲ್ಲಿನ ಹಳೆಯ ಆಲದ ಮರದ ದೊಡ್ಡ ಕೊಂಬೆ ಮುರಿದು ಬಿದ್ದಿದೆ. ಅಲ್ಲಲ್ಲಿ ಮರದ ಕೊಂಬೆಗಳು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಉಂಟಾಗಿದ್ದ ವಿದ್ಯುತ್ ಸಮಸ್ಯೆಯನ್ನು ಶನಿವಾರ ಹೆಸ್ಕಾಂ ಸಿಬ್ಬಂದಿ ಸರಿಪಡಿಸಿದರು. ಶನಿವಾರ ಸಂಜೆ ಪಟ್ಟಣದ ಸೋಮೇಶ್ವರ ತೇರಿನ ಮನೆ ಹತ್ತಿರದ ಇಟಗಿ ಬಸವೇಶ್ವರ ದೇವಸ್ಥಾನ ಮುಂಭಾಗದ ತೆಂಗಿನ ಮರಕ್ಕೆ ಏಕಾಏಕಿ ಬೆಂಕಿ ಹೊತ್ತಿಕೊಂಡಿತ್ತು. ಕೂಡಲೆ, ಸ್ಥಳೀಯರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.