ಮೃತಪಟ್ಟಿರುವ ತಂದೆ ಜೀವಂತವಾಗಿದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ

Huge Fraud
Published on

ಮೈಸೂರು: ಮೃತಪಟ್ಟಿರುವ ತಂದೆ ಜೀವಂತವಾಗಿದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿಸಿ, ಕೋಟ್ಯಂತರ ರೂ. ಮೌಲ್ಯದ ಜಮೀನು ಮಾರಾಟ ಮಾಡಿ ವಂಚಿಸಲಾಗಿದೆ.

ಮೈಸೂರು ತಾಲೂಕಿನ ಮಂಡಕಳ್ಳಿ ನಿವಾಸಿಗಳಾದ ವಿವೇಕ್ ಹಟ್ಟಿ, ಸುಮಾ, ಅನಿತಾ, ಪುಷ್ಪಾ ಸೇರಿದಂತೆ ಐವರ ವಿರುದ್ಧ ಪಾಂಡವಪುರದ ನಿವಾಸಿ ಎಂ.ವಿ.ಕಿಶೋರ್ ದೂರು ನೀಡಿದ್ದು, ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮಂಡಕಳ್ಳಿಯಲ್ಲಿ ನನ್ನ ತಾತ ಪತ್ರಪ್ಪ ಅವರಿಗೆ ಸೇರಿದ 4.19 ಎಕರೆ ಜಮೀನನ್ನು ದೊಡ್ಡಪ್ಪ ಪ್ರಭುದೇವ್ ನಮ್ಮ ಗಮನಕ್ಕೆ ತಾರದೆ ತಮ್ಮ ಹೆಸರಿಗೆ ಮಾಡಿಕೊಂಡಿದ್ದರು. ಜತೆಗೆ, ಅದನ್ನು ನೀಲಕಂಠ ನರಸಿಂಹನ್ ಶರ್ಮನ್ ಅವರಿಗೆ ಮಾರಾಟ ಮಾಡಿದ್ದರು.

ಈ ಕುರಿತು ಕೋರ್ಟ್ ಮೊರೆ ಹೋಗಿದ್ದರಿಂದ ಜಮೀನಿನ ಮಾಲೀಕತ್ವವು ನನಗೆ ಸೇರುವಂತಾಯಿತು. ಜಮೀನು ಪಡೆದಿದ್ದ ನರಸಿಂಹನ್ ಶರ್ಮನ್ ಕೂಡ ಹೈಕೋರ್ಟ್ ಮೊರೆ ಹೋದರು. ನಂತರದಲ್ಲಿ ಅವರು ಅಕಾಲಿಕವಾಗಿ ಮೃತಪಟ್ಟಿದ್ದರಿಂದ ಅವರ ಪುತ್ರ ವಿವೇಕ್ ಹಟ್ಟಿ ಕೋರ್ಟ್‌ನಲ್ಲಿ ಪ್ರಕರಣವನ್ನು ಹಿಂಪಡೆಯುವುದಾಗಿ ಹೇಳಿ ಮುಕ್ತಾಯಗೊಳಿಸಿದ್ದರು.

ಮತ್ತೆ 2024ರಲ್ಲಿ ವಿವೇಕ್ ಹಟ್ಟಿ ಅವರು ತಮ್ಮ ತಂದೆ ಸಾವಿಗೀಡಾಗಿರುವ ವಿಚಾರವನ್ನು ಮುಚ್ಚಿಟ್ಟು ಅವರ ಹೆಸರಿನಲ್ಲಿ ತತ್ಕಾಲ್ ಪೋಡಿ ಪಡೆದರು.

ಮೃತ ವ್ಯಕ್ತಿ ನರಸಿಂಹನ್ ಶರ್ಮನ್ ಎಂಬುದಾಗಿ ಬೇರೊಬ್ಬ ವ್ಯಕ್ತಿಯನ್ನು ಕರೆ ತಂದು ಆಸ್ತಿಯನ್ನು ಮೂವರು ಉದ್ಯಮಿಗಳಿಗೆ ಮಾರಾಟ ಮಾಡಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ಕಿಶೋರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net