

ಪಾಂಡವಪುರ :ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಹೊರವಲಯದಲ್ಲಿ ದರೋಡೆಕೋರನಿಂದ ಮೃತಪಟ್ಟಿದ್ದ ರಮೇಶ್ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಂಗಳವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತನ ಹೇಳಿ ವೈಯಕ್ತಿಕವಾಗಿ 50 ಸಾವಿರ ರೂ. ಪರಿಹಾರ ನೀಡಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಜತೆಗೂಡಿ ಮನೆಗೆ ಭೇಟಿಕೊಟ್ಟ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮೃತ ರಮೇಶ್ ಪತ್ನಿ ಯಶೋದಮ್ಮ ಹಾಗೂ ಕುಟುಂಬಸ್ಥರ ಬಳಿ ಘಟನೆ ವಿವರ ಪಡೆದರು. ಬಳಿಕ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಪರಿಹಾರ ನೀಡಿದರು. ಅಲ್ಲದೆ ಸರ್ಕಾರದಿಂದ ಸಾಧ್ಯವಾದರೆ ನೆರವು ಕೊಡಿಸುವುದಾಗಿ ಭರವಸೆ ನೀಡಿದರು.
ಕ್ಯಾತನಹಳ್ಳಿ ಗ್ರಾಮದ ಒಂಟಿ ಮನೆಯ ದರೋಡೆ, ಹತ್ಯೆ ಘಟನೆಯಿಂದ ಸಾಕಷ್ಟು ನೋವುಂಟಾಯಿತು. ಇಂತಹ ಘಟನೆಗಳು ಮರುಕಳಿಸದಂತೆ ಈಗಾಗಲೇ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ. ಜಿಲ್ಲಾದ್ಯಂತ ಪೊಲೀಸ್ ಗಸ್ತು ಹೆಚ್ಚಿಸಲು ಪೊಲೀಸರಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಆದರೆ, ಒಂಟಿ ಮನೆಗಳಲ್ಲಿ ಇರುವವರು ಎಚ್ಚರಿಕೆಯಿಂದ ಇರಬೇಕು, ಅನುಮಾನ ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು, ಮನ್‌ಮುಲ್ ಅಧ್ಯಕ್ಷ ಬೋರೇಗೌಡ, ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ಬಿ.ಜೆ.ಸ್ವಾಮಿ, ಮುಖಂಡರು ಹಾಜರಿದ್ದರು.