

ರಾಯಚೂರು: ದೇವದುರ್ಗ ತಾಲೂಕಿನ ಕೊತ್ತದೊಡ್ಡಿ ಗ್ರಾಮದಲ್ಲಿ ಅಕ್ರಮ ಮರಳು ಸಾಗಣೆ ಟ್ರಾಕ್ಟರ್ ಡಿಕ್ಕಿ ಹೊಡೆದು ಮೃತಪಟ್ಟ ಎಸ್‌ಆರ್‌ಪಿಎಸ್ ಪಿಯು ಕಾಲೇಜು ವಿದ್ಯಾರ್ಥಿ ಮಲ್ಲೇಶ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ತಾರಾನಾಥ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಂದ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಎಸ್‌ಆರ್‌ಪಿಎಸ್ ಕಾಲೇಜಿನಿಂದ ಮೆರವಣಿಗೆ ಮೂಲಕ ಆಗಮಿಸಿ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ವಿದ್ಯಾರ್ಥಿ ಸಾವು ಅಪಘಾತದಿಂದ ಅಲ್ಲ. ಅದು ಮರಳು ಮಾಫಿಯಾ ಮಾಡಿದ ಕೊಲೆಯಾಗಿದ್ದು, ಮೃತ ವಿದ್ಯಾರ್ಥಿ ಕುಟುಂಬಕ್ಕೆ ಕನಿಷ್ಠ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಯಥೇಚ್ಛವಾಗಿ ನಡೆಯುತ್ತಿದ್ದು, ದಂಧೆಯ ಹಿಂದೆ ಪ್ರಬಲ ರಾಜಕೀಯ ವ್ಯಕ್ತಿಗಳ ಕೈವಾಡವಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮರಳು ಮಾಫಿಯಾ ತಡೆಗೆ ಆದೇಶಿಸಿದ್ದರೂ ಯಾವುದೇ ಕ್ರಮವಾಗಿಲ್ಲ. ಹೊಲದಲ್ಲಿ ಮಲಗಿದ್ದ ಮೂವರ ಮೇಲೆ ಜೆಸಿಬಿ ಹರಿಸಿ ಕೊಲೆ ಮಾಡಲಾಗಿದ್ದು, ಇತ್ತೀಚೆಗೆ ಮಾಜಿ ಸೈನಿಕನ ಮೇಲೆ ಹಲ್ಲೆ ನಡೆಸಲಾಗಿದೆ.
ಅಕ್ರಮ ಮರಳು ದಂಧೆಗೆ ಅಮಾಯಕ ಜನರು ಬಲಿಯಾಗುತ್ತಿದ್ದು, ಸಂಸ್ಥೆಯ ಎಸ್‌ಆರ್‌ಪಿಎಸ್ ಕಾಲೇಜಿನ ವಿದ್ಯಾರ್ಥಿ ಮಲ್ಲೇಶ ಕೂಡಾ ಅಕ್ರಮ ಮರಳು ಸಾಗಣೆ ಟ್ರಾಕ್ಟರ್ ಹರಿದು ಸಾವನ್ನಪ್ಪಿದ್ದು, ವಿದ್ಯಾರ್ಥಿ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ತಾರಾನಾಥ ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಬಾಪತಿ ಪಾಟೀಲ್, ಪದಾಕಾರಿಗಳಾದ ಜಟ್ರಂ ಶ್ರೀನಿವಾಸ, ಪವನ್ ಸುಖಾಣಿ, ಮೃತ್ಯುಂಜಯ, ಸಚಿನ್ ಇನ್ನಾಣಿ, ವಿಷ್ಣು ಚೌಧರಿ, ಜಿ.ಶಿವಮೂರ್ತಿ, ಉಪನ್ಯಾಸಕರಾದ ವೀರೇಶ, ರಾಘಮ್ಮ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.