ಮೃತ ಬಾಲಕನ ಅಂತ್ಯಕ್ರಿಯೆ

04chn7
Published on

ಕೊಳ್ಳೇಗಾಲ: ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಶಸಚಿಕಿತ್ಸೆಗೊಳಪಟ್ಟ ಬಳಿಕ ಮೃತಪಟ್ಟಿದ್ದ ಬಾಲಕನ ಅಂತ್ಯಕ್ರಿಯೆ ಸೋಮವಾರ ಬೆಳಗ್ಗೆ ನಡೆಯಿತು.

ತಾಲೂಕಿನ ಹಳೇ ಹಂಪಾಪುರದ ಬಾಲಕ ಆರ್.ವಿಜಯ್(10) ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾನೆಂದು ಗ್ರಾಮಸ್ಥರು ಆರೋಪಿಸಿ ಶನಿವಾರ ಧರಣಿ ನಡೆಸಿದ್ದರು. ಸ್ಥಳಕ್ಕೆ ತೆರಳಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಶವ ಪರೀಕ್ಷೆ ವರದಿ ಬಂದ ಬಳಿಕ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವುದಾಗಿ ಭರವಸೆ ನೀಡಿದ್ದರು. ಭಾನುವಾರ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು.

ಮೃತದೇಹವನ್ನು ಊರಿಗೆ ಕೊಂಡೊಯ್ದ ಗ್ರಾಮಸ್ಥರು, ‘ಶಾಸಕ ಎ.ಆರ್.ಕೃಷ್ಣಮೂರ್ತಿ ಸ್ಥಳಕ್ಕೆ ಬರಬೇಕು. ನ್ಯಾಯದ ಭರವಸೆ ನೀಡುವವರೆಗೂ ಅಂತ್ಯಕ್ರಿಯೆ ನಡೆಸುವುದಿಲ್ಲ’ ಎಂದು ಪಟ್ಟುಹಿಡಿದರು.

ಕಾರ್ಯಕ್ರಮದ ನಿಮಿತ್ತ ಚಿತ್ರದುರ್ಗಕ್ಕೆ ಹೋಗಿದ್ದ ಶಾಸಕ ಎ.ಆರ್.ಕೃಷ್ಣಮೂರ್ತಿ ವಿಷಯ ತಿಳಿದು ಭಾನುವಾರ ರಾತ್ರಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಮೃತ ಬಾಲಕನ ಮನೆಯವರಿಗೆ ಸಾಂತ್ವನ ಹೇಳಿದರು. ಬಳಿಕ ಗ್ರಾಮಸ್ಥರು, ಹೋರಾಟಗಾರರಾದ ಬಸವಣ್ಣ, ಶೇಖರ್ ಬುದ್ಧ ಮತ್ತು ಇತರರೊಂದಿಗೆ ಮಾತುಕತೆ ನಡೆಸಿದರು. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ನಾನು ನಿಮ್ಮ ಪರವಾಗಿ ಇದ್ದೇನೆ ಎಂದರು. ಇದಕ್ಕೆ ಒಪ್ಪಿದ ಗ್ರಾಮಸ್ಥರು ಸೋಮವಾರ ಬೆಳಗ್ಗೆ ಮೃತ ಬಾಲಕನ ಅಂತ್ಯಕ್ರಿಯೆ ಮುಗಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net