

ಮೈಸೂರು: ಶಿಶುಗಳ ಲಾಲನೆ, ಪಾಲನೆ ಮುಖ್ಯವಾದದ್ದು, ಈ ನಿಟ್ಟಿನಲ್ಲಿ ಮೃಗಾಲಯಕ್ಕೆ ಭೇಟಿ ನೀಡುವ ತಾಯಂದಿರು ಮಕ್ಕಳಿಗೆ ಹಾಲುಣಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಿರುವುದು ಶ್ಲಾಘನೀಯ ಕಾರ್ಯ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಮೈಸೂರು ಅಮಿಟಿ ಲೇಡಿಸ್ ಸರ್ಕಲ್ 108ರಿಂದ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ನಿರ್ಮಿಸಿರುವ ಶಿಶು ಆರೈಕೆ ಕೊಠಡಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಪ್ರವಾಸಿ ತಾಣವಾಗಿರುವ ಮೈಸೂರಿಗೆ ಹೆಚ್ಚು ಪ್ರವಾಸಿಗರು ಬರುತ್ತಿದ್ದು, ಅರಮನೆ ಬಿಟ್ಟರೆ ಮೃಗಾಲಯಕ್ಕೆ ಹೆಚ್ಚು ಜನ ಬರುತ್ತಾರೆ. ಚಿಕ್ಕ ಮಕ್ಕಳನ್ನು ಕರೆತರುವುದರಿಂದ ತಾಯಂದಿರು ಮಗುವಿಗೆ ಹಾಲುಣಿಸಲು ಸೂಕ್ತ ಜಾಗದ ಅಗತ್ಯ ಇತ್ತು ಎಂದು ಅಭಿಪ್ರಾಯಪಟ್ಟರು.
ಮೃಗಾಲಯದಲ್ಲಿ ಈಗಾಗಲೇ ಎರಡು ಇಂತಹ ಶಿಶು ಆರೈಕೆ ಕೊಠಡಿಗಳು ಇದ್ದು, ಈಗ ಮತ್ತೊಂದು ಕೊಠಡಿ ನಿರ್ಮಿಸಿರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾದರೂ ಸಮಸ್ಯೆ ಇಲ್ಲ. ಇದೊಂದು ವಿನೂತನ ಪ್ರಯತ್ನವಾಗಿದ್ದು, ಇದಕ್ಕಾಗಿ ಮೈಸೂರು ಅಮಿಟಿ ಲೇಡಿಸ್ ಸರ್ಕಲ್ ಅನ್ನು ಅಭಿನಂದಿಸುತ್ತೇನೆ ಎಂದರು.
ಮೈಸೂರಿನ ಆರ್ಥಿಕತೆ ಮುಂದುವರಿಯುತ್ತಿರುವುದು ಪ್ರವಾಸೋದ್ಯಮದಿಂದಲೇ. ಹಾಗಾಗಿ ಪ್ರವಾಸಿಗರಿಗೆ ಸೂಕ್ತ ಸೌಲಭ್ಯ, ಮಾಹಿತಿ ನೀಡಬೇಕಿದೆ. ನಮ್ಮ ಪೂರ್ವಜರು ಸ್ಥಾಪನೆ ಮಾಡಿರುವ ಮೃಗಾಲಯ ದೇಶದಲ್ಲಿಯೇ ಪ್ರಥಮ ಸ್ಥಾನ ಪಡೆಯುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಮೈಸೂರು ಅಮಿಟಿ ಲೇಡಿಸ್ ಸರ್ಕಲ್ ಅಧ್ಯಕ್ಷೆ ಅಪರ್ಣ ರಂಗ ಮಾತನಾಡಿ, ಮೃಗಾಲಯಕ್ಕೆ ಲಕ್ಷಾಂತರ ಮಂದಿ ಪ್ರವಾಸಿಗರು ಬರುತ್ತಾರೆ. ಹಾಗಾಗಿ ಮಕ್ಕಳಿಗೆ ಹಾಲುಣಿಸಲು, ಆರೈಕೆ ಮಾಡಲು ತಾಯಂದಿರಿಗೆ ಸೂಕ್ತ ಕೊಠಡಿಗಳ ಅಗತ್ಯ ಇತ್ತು. ಅದಕ್ಕಾಗಿ ನಮ್ಮ ಮೈಸೂರು ಅಮಿಟಿ ಲೇಡಿಸ್ ಸರ್ಕಲ್ನಿಂದ ಅಂದಾಜು 11 ಲಕ್ಷ ರೂ. ವೆಚ್ಚದಲ್ಲಿ ಈ ಶಿಶು ಆರೈಕೆ ಕೇಂದ್ರ ನಿರ್ಮಿಸಲಾಗಿದೆ. ಜಾಗ ನೀಡಿ ಸಹಕರಿಸಿದ ಮೃಗಾಲಯ ಪ್ರಾಧಿಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ನಮ್ಮ ಸಂಸ್ಥೆ ಮೂಲಕ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಶ್ರಮಿಸುತ್ತೇವೆ. ಈ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸಹಕಾರಿ ಆಗುತ್ತಿದೆ. ಮುಂದೆಯೂ ಇಂತಹ ಸೇವಾ ಕಾರ್ಯ ನಿರಂತರವಾಗಿರುತ್ತದೆ ಎಂದು ಮಾಹಿತಿ ನೀಡಿದರು.
ರಾಜವಂಶಸ್ಥೆ ತ್ರಿಷಿಕಾಕುಮಾರಿ ದೇವಿ, ಮೃಗಾಲಯ ನಿರ್ದೇಶಕ ಡಿ.ಮಹೇಶ್‌ಕುಮಾರ್ ಇತರರು ಇದ್ದರು.