

ಮೈಸೂರು: ನಗರದ ಪ್ರಮುಖ ಪ್ರವಾಸಿ ತಾಣವಾದ ಚಾಮರಾಜೇಂದ್ರ ಮೃಗಾಲಯ ಮತ್ತು ದಸರಾ ವಸ್ತುಪ್ರದರ್ಶನದಲ್ಲಿ ಸೋಮವಾರ ಚಿಣ್ಣರ ಚಿಲಿಪಿಲಿ ಮೇಳೈಸಿತ್ತು.
ಶಾಲಾ ಚೌಕಟ್ಟಿನಿಂದ ಹೊರ ಬಂದ ಮಕ್ಕಳು ಇಲ್ಲಿ ಕುಣಿದು ಕುಪ್ಪಳಿಸಿದರು. ನಲಿದು ನರ್ತಿಸಿದರು. ಮನಸೋ ಇಚ್ಛೆ ಸಂಭ್ರಮಿಸಿ ಮೈ ಮರೆತರು. ಇದಕ್ಕೆ ಕಾರಣವಾಗಿದ್ದು ‘ಮಕ್ಕಳ ದಿನಾಚರಣೆ’. ಈ ವಿಶೇಷ ದಿನದ ಪ್ರಯುಕ್ತ ವಿವಿಧ ಪ್ರವಾಸಿ ತಾಣಗಳಿಗೆ ಲಗ್ಗೆ ಇಟ್ಟ ಸಹಸ್ರಾರು ಪುಟಾಣಿಗಳು ಹರ್ಷೋಲ್ಲಾಸದಲ್ಲಿ ಮಿಂದೆದ್ದರು.
ಮೃಗಾಲಯ ವೀಕ್ಷಣೆಗೆ ಉತ್ಸಾಹ
ನಗರದ ವಿವಿಧ ಶಾಲೆ ಸೇರಿದಂತೆ ಜಿಲ್ಲೆಯ ವಿವಿಧ ಊರುಗಳಿಂದ ಬಂದಿದ್ದ ಚಿಣ್ಣರು ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಲು ಮುಗಿಬಿದ್ದಿದ್ದರು. ಬೆಳಗ್ಗೆ 8.30ರಿಂದ ಮಧ್ಯಾಹ್ನ 12ರ ವರೆಗೆ 1ರಿಂದ 7ನೇ ತರಗತಿ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಅವಕಾಶ ಕಲ್ಪಿಸಿಕೊಡಲಾಯಿತು. ಇದನ್ನು ಸದ್ಬಳಕೆ ಮಾಡಿಕೊಂಡ ಸಾವಿರ ವಿದ್ಯಾರ್ಥಿಗಳು ಇಲ್ಲಿರುವ ವನ್ಯಜೀವಿಗಳನ್ನು ಕಣ್ತುಂಬಿಕೊಂಡರು
ಹುಲಿ, ಸಿಂಹ, ಚಿಂಪಾಂಜಿ, ಹಾವು, ಚಿರತೆ, ಸೇರಿದಂತೆ ವಿವಿಧ ಪ್ರಾಣಿಗಳ ಬೋನಿನ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸೇರಿದ್ದರು. ಕೆಲ ಮಕ್ಕಳು ಪ್ರಾಣಿಗಳನ್ನು ಮೊಬೈಲ್ ಫೋನಿನಲ್ಲಿ ಕ್ಲಿಕ್ಕಿಸಿಕೊಂಡರು. ವಿದ್ಯಾರ್ಥಿಗಳು ಮತ್ತು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ವಸ್ತುಪ್ರದರ್ಶನದಲ್ಲೂ ಸಡಗರ:
ದಸರಾ ವಸ್ತುಪ್ರದರ್ಶನಕ್ಕೂ ಮಕ್ಕಳ ಸೇನೆ ಭೇಟಿ ನೀಡಿ ಸಂಭ್ರಮಿಸಿತು. ಮಕ್ಕಳಿಗಾಗಿ ಬೆಳಗ್ಗೆ 10ರಿಂದ ಮಧ್ಯಾಹ್ನ 3ರ ವರೆಗೆ ಉಚಿತ ಪ್ರವೇಶಾವಕಾಶದ ವ್ಯವಸ್ಥೆ ಮಾಡಲಾಗಿತ್ತು.
ಇಲ್ಲಿರುವ ವಿವಿಧ ಇಲಾಖೆ, ಜಿಲ್ಲಾ ಪಂಚಾಯಿತಿ, ನಿಗಮ ಮಂಡಳಿಗಳ ಮಳಿಗೆಗಳು, ವಾಣಿಜ್ಯ ಮಳಿಗೆಗಳು, ತಿಂಡಿ ತಿನಿಸು ಮಳಿಗೆಗಳಿಗೆ ಭೇಟಿ ನೀಡಿದ್ದರು. ಗುಂಪು ಗುಂಪಾಗಿ ತಮ್ಮ ಗೆಳೆಯರೊಂದಿಗೆ ಬಂದ ವಿದ್ಯಾರ್ಥಿಗಳು ಇಲ್ಲಿಯ ವಾಣಿಜ್ಯ ಮಳಿಗೆಗಳಲ್ಲಿ ಮಾರಾಟ ಮಾಡುವ ವಸ್ತುಗಳನ್ನು ಖರೀದಿಸಿದರು. ವಿದ್ಯಾರ್ಥಿನಿಯರು ಬಳೆ, ಓಲೆ, ಪಾದರಕ್ಷೆಗಳು, ಬಟ್ಟೆ, ಆಟಿಕೆ ಸಾಮಗ್ರಿ ಖರೀದಿಸುವುದಲ್ಲಿ ಮಗ್ನರಾಗಿದ್ದರು. ಬಳಿಕ ವಸ್ತು ಪ್ರದರ್ಶನದಲ್ಲಿದ್ದ ಆಟಿಕೆಗಳ ಮೇಲೆ ಸವಾರಿ ಮಾಡಿ ಕುಣಿದು ಕುಪ್ಪಳಿಸಿದರು.
ಅರಮನೆಯಲ್ಲಿ ಭಣ ಭಣ:
ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿ ಮಕ್ಕಳಿಗೆ ಉಚಿತ ಪ್ರವೇಶವನ್ನು ಈ ಸಲ ಕಲ್ಪಿಸಿರಲಿಲ್ಲ. ಮಕ್ಕಳ ದಿನಾಚರಣೆ ಅಂಗವಾಗಿ ಪ್ರತಿ ವರ್ಷವೂ ಮಕ್ಕಳಿಗೆ ಟಿಕೆಟ್‌ರಹಿತ ಪ್ರವೇಶ ನೀಡಲಾಗುತ್ತಿತ್ತು. ಇದು ಮಕ್ಕಳ ಸಡಗರಕ್ಕೆ ಕಾರಣವಾಗುತ್ತಿತ್ತು. ಆದರೆ, ಈ ಸಲ ಸಂಭ್ರಮ ಕಾಣಲಿಲ್ಲ.