

ಮೈಸೂರು: ಮೃಗಾಲಯಗಳಲ್ಲಿ ಪ್ರಾದೇಶಿಕ ಭಾಷೆ ಬಳಕೆಗೆ ಒತ್ತು ನೀಡಬೇಕು ಎಂದು ಕೇಂದ್ರ ಮೃಗಾಲಯ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಂಜಯ್ ಶುಕ್ಲ ದೇಶದ ವಿವಿಧ ಮೃಗಾಲಯಗಳ ನಿರ್ದೇಶಕರಿಗೆ ಸಲಹೆ ನೀಡಿದರು.
ಕರ್ನಾಟಕ ಮೃಗಾಲಯ ಪ್ರಾಧಿಕಾರ ಹಾಗೂ ಮೈಸೂರು ಮೃಗಾಲಯ ವತಿಯಿಂದ ಗುರುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಮೃಗಾಲಯಗಳ ನಿರ್ದೇಶಕರ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಮೃಗಾಲಯಗಳಲ್ಲಿ ನಡೆಯುವ ವನ್ಯಜೀವಿಗಳ ಸಂರಕ್ಷಣಾ ಕಾರ್ಯ, ವನ್ಯಜೀವಿಗಳ ಕುರಿತು ಪ್ರವಾಸಿಗರಲ್ಲಿ ಅರಿವು ಮೂಡಿಸಲು ಪ್ರಾದೇಶಿಕ ಭಾಷೆ ಬಳಸುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.
ಮೃಗಾಲಯಗಳಲ್ಲಿ ವನ್ಯಜೀವಿ ಸಂರಕ್ಷಣಾ ಕಾರ್ಯ ಉತ್ತಮವಾಗಿ ನಡೆಯುತ್ತಿದ್ದು, ಈ ಸಂರಕ್ಷಣಾ ಕಾರ್ಯಗಳ ಕುರಿತು ಜನರಿಗೆ ಮಾಧ್ಯಮಗಳ ಮೂಲಕ ತಿಳಿಸುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳ ಬೇಕು ಎಂದು ಸಲಹೆ ನೀಡಿದರು.
ಕೇಂದ್ರ ಮೃಗಾಲಯ ಪ್ರಾಧಿಕಾರ ದೇಶದ ಮೃಗಾಲಯಗಳಿಗೆ ಉತ್ತಮ ಸೇವೆಗಳನ್ನು ಒದಗಿಸುತ್ತಿದೆ. ಮೃಗಾಲಯಗಳಿಂದ ಬರುವ ಎಲ್ಲ ಪ್ರಸ್ತಾವನೆಗಳಿಗೆ ತಕ್ಷಣ ಪರಿಶೀಲಿಸಿ ಕ್ರಮ ವಹಿಸಲಾಗುತ್ತಿದೆ. ಮೃಗಾಲಯಗಳಿಂದ ಬರುವ ಅಂತಾರಾಷ್ಟ್ರೀಯ ಮಟ್ಟದ ಯಾವುದೇ ಪ್ರಸ್ತಾವನೆಗಳನ್ನು ಬಾಕಿ ಉಳಿಸಿಕೊಂಡಿಲ್ಲ ಎಂದು ಹೇಳಿದರು.
ಮೈಸೂರಿನಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ. ಎರಡು ದಿನಗಳಲ್ಲಿ ಹಲವು ಗೋಷ್ಠಿಗಳು ನಡೆಯಿತು. ಆದರೆ, ಸಮಯದ ಕೊರತೆಯಿಂದ ಗೋಷ್ಠಿಯ ನಂತರ ಸಂವಾದಕ್ಕೆ ಅವಕಾಶ ನೀಡಲು ಸಾಧ್ಯವಾಗಲಿಲ್ಲ. ಈ ಕೊರತೆಯನ್ನು ಮುಂದಿನ ಸಮ್ಮೇಳನದಲ್ಲಿ ನೀಗಿಸುವ ಪ್ರಯತ್ನ ನಡೆಸಲಾಗುವುದು. ಈ ನಿಟ್ಟಿನಲ್ಲಿ ಮುಂದಿನ ಬಾರಿ ಮೂರು ದಿನಗಳ ಕಾಲ ಸಮ್ಮೇಳನ ಹಮ್ಮಿಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಪಿಸಿಸಿಎಫ್ ರಾಜೀವ್ ರಂಜನ್ ಮಾತನಾಡಿ, ವನ್ಯಜೀವಿ ಹಾಗೂ ಪರಿಸರವನ್ನು ಪ್ರೀತಿಸು ವುದು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ. ಇದರ ಮುಂದುವರೆದ ಭಾಗವಾಗಿ ಮೃಗಾಲಯದತ್ತ ಯುವಜರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಿ ಅವರಲ್ಲಿ ವನ್ಯಜೀವಿ ಹಾಗೂ ಪರಿಸರದ ಕುರಿತು ಪ್ರೀತಿ ಮೂಡಿಸುವ ಕಾರ್ಯ ಮಾಡಬೇಕು. ವನ್ಯಜೀವಿಗಳು ಹಾಗೂ ಅವುಗಳ ವರ್ತನೆ ಕುರಿತು ಯುವಜನರಿಗೆ ತಿಳಿಸಿಕೊಡಬೇಕು ಎಂದು ಹೇಳಿದರು.
ವಿಶೇಷವಾಗಿ ಮಕ್ಕಳು ಪ್ರಾಣಿಗಳು ಹಾಗೂ ವನ್ಯಜೀವಿಗಳನ್ನು ಹೆಚ್ಚಾಗಿ ಪ್ರೀತಿಸುತ್ತಾರೆ. ಮಕ್ಕಳಲ್ಲಿ ವನ್ಯಜೀವಿ ಹಾಗೂ ಪರಿಸರದ ಕುರಿತು ಅರಿವು ಮೂಡಿಸಿ ವನ್ಯಜೀವಿಗಳು ಹಾಗೂ ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿ ಮೃಗಾಲಯಗಳನ್ನು ನಿರ್ವಹಣೆ ಮಾಡುವ ದೊಡ್ಡ ಸವಾಲು ಎದುರಾಯಿತು. ಆ ಸಂದರ್ಭ ವಿವಿಧ ಕಂಪನಿಗಳು ಸಿಎಸ್‌ಆರ್ ನಿಧಿಯನ್ನು ಮೃಗಾಲಯಗಳ ನಿರ್ವಹಣೆಗೆ ನೀಡಿದವು. ಅಲ್ಲದೆ ಸಾಕಷ್ಟು ಜನರು ವನ್ಯಪ್ರಾಣಿಗಳನ್ನು ದತ್ತು ಪಡೆದರು. ಈ ರೀತಿ ಒಳ್ಳೆಯ ಹಾಗೂ ಕೆಟ್ಟ ದಿನಗಳು ಎದುರಾಗುತ್ತದೆ. ಯಾವುದೇ ಪರಿಸ್ಥಿಯನ್ನಾದರೂ ಎದುರಿಸಲು ನಾವು ಸಜ್ಜಾಗಬೇಕು ಎಂದರು.
ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ವನ್ಯಜೀವಿ ಸಂರಕ್ಷಣಾ ಕಾರ್ಯದ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಈ ವಿಚಾರದಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಅದು ಕಡಿಮೆಯೇ. ಹಾಗಾಗಿ ಜಾಗೃತಿ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ರಾಜ್ಯ ಹಾಗೂ ದೇಶದಲ್ಲಿರುವ ಎಲ್ಲ ಮೃಗಾಲಯಗಳ ಕುರಿತು ಪ್ರವಾಸಿಗರಿಗೆ ಮಾಹಿತಿ ಇಲ್ಲ. ಪ್ರಮುಖ ಮೃಗಾಲಯಗಳಿಗೆ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಸಣ್ಣ ಮೃಗಾಲಯಗಳ ಕಡೆಗೂ ಪ್ರವಾಸಿಗರನ್ನು ಆಕರ್ಷಿಸಲು ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಬೇಕು. ವಿವಿಧ ರಾಜ್ಯಗಳಲ್ಲಿ ಮೃಗಾಲಯಗಳಿಗೆ ಅಲ್ಲಿನ ಸರ್ಕಾರ ಸಾಕಷ್ಟು ನೆರವು ನೀಡುತ್ತಿದ್ದು, ಅದೇ ರೀತಿ ರಾಜ್ಯದಲ್ಲೂ ರಾಜ್ಯ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದ್ದು, ಈ ಪ್ರಮಾಣ ಮತ್ತಷ್ಟು ಹೆಚ್ಚಾಗಬೇಕು ಎಂದರು.
ವೇದಿಕೆಯಲ್ಲಿ ತಮಿಳುನಾಡು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಪಿಸಿಸಿಎಫ್ ಶ್ರೀನಿವಾಸ್ ರೆಡ್ಡಿ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ. ರವಿ, ಸದಸ್ಯೆ ಜ್ಯೋತಿ ರೇಚಣ್ಣ, ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಇದ್ದರು.