ಮೃಗಾಲಯಕ್ಕೆ ಹೊಸ ಪಕ್ಷಿಗಳ ಆಗಮನ ವಿಳಂಬ

CTD ADUMALLESHAVRA ZOO......
Published on

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ

ಜೋಗಿಮಟ್ಟಿ ವನ್ಯಜೀವಿಧಾಮ ವ್ಯಾಪ್ತಿಯ ಆಡು ಮಲ್ಲೇಶ್ವರ ಕಿರು ಮೃಗಾಲಯಕ್ಕೆ 11 ಬಗೆಯ ಪಕ್ಷಿಗಳು ಹಾಗೂ 2 ಜತೆ ಜೀಬ್ರಾ ತರಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.

ಈ ಮೃಗಾಲಯದಲ್ಲಿ 4 ಹೊಸ ಪಕ್ಷಿ ಮನೆಗಳು ಖಾಲಿ ಇವೆ. ಬನ್ನೇರುಘಟ್ಟ ಸೇರಿ ರಾಜ್ಯದ ವಿವಿಧ ಮೃಗಾಲಯಗಳಲ್ಲಿರುವ ಪಕ್ಷಿಗಳನ್ನು ತರುವ ಆಲೋಚನೆ ಇದೆಯಾದರೂ ಅಲ್ಲಿಯ ಮೃಗಾಲಯಗಳಿಂದ ಕಳಿಸುವ ಪಕ್ಷಿಗಳ ಸಂಖ್ಯೆ ತೀರಾ ಕಡಿಮೆ. ಆದ್ದರಿಂದ ದಾನಿಗಳು ಮುಂದೆ ಬಂದು ಪಕ್ಷಿಗಳನ್ನು ಖರೀದಿಸಿಕೊಟ್ಟರೆ ಅನುಕೂಲ ಎಂಬ ಅಭಿಪ್ರಾಯ ಅಧಿಕಾರಿಗಳ ವಲಯದಲ್ಲಿದೆ.

ಒಂದು ಜತೆ ಹುಲಿಗಳನ್ನು ತಂದ ಸಂದರ್ಭದಲ್ಲೇ ಇಲ್ಲಿಗೆ ಜೀಬ್ರಾಗಳು ಬರಬೇಕಿತ್ತು. ಅವುಗಳನ್ನು ಸಹ ತರುವುದು ವಿಳಂಬವಾಗಿದೆ. ಮಿಲಿಟರಿಮಕಾವ್, ಸ್ಕಾರ್ಲೆಟ್ ಮಕಾವ್, ಬ್ಲೂ ಆ್ಯಂಡ್ ಯಲ್ಲೋ ಮಕಾವ್, ಗೋಲ್ಡನ್ ಫೆಸೆಂಟ್, ಯಲ್ಲೋ ಗೋಲ್ಡನ್ ಫೆಸೆಂಟ್, ಲೇಡಿ ಅಮ್ಹೆರ್ಸ್ಟ್, ಸಿಲ್ವರ್ ಫೆಸೆಂಟ್, ರೋಸಿ ಫೇಸಡ್‌ಲವ್ ಬರ್ಡ್ಸ್, ರಿಂಗ್‌ನೆಕ್ಡ್ ಪ್ಯಾರಕೀಟ್‌ಗಳು, ಕಾಕ್ಟೀಲ್ಸ್, ಬುಡ್ಗೆರಿಗರ್ಸ್ ಪಕ್ಷಿಗಳನ್ನು ತರಲು ಉದ್ದೇಶಿಸಲಾಗಿದೆ.

ಮೃಗಾಲಯದಲ್ಲಿರುವ 7 ಕೊಳವೆ ಬಾವಿಗಳ ಪೈಕಿ 2 ಮಾತ್ರ ಚಾಲನೆಯಲ್ಲಿವೆ. ಪದೆ ಪದೇ ವಿದ್ಯುತ್ ಸಂಪರ್ಕ ಕಡಿತದ ಸಮಸ್ಯೆ ಇದೆ. ನೀರಿನ ಸಂಗ್ರಹಕ್ಕೆ ಒಂದು ಓವರ್ ಹೆಡ್ ಟ್ಯಾಂಕ್, ಸಂಪ್ ಬೇಕಿದೆ. ಕ್ಯಾಮರಾಗಳನ್ನು ಅವಳಡಿಸಿ, ಸೂಕ್ತ ನಿರ್ವಹಣೆಗೆ ಕ್ರಮ ವಹಿಸಬೇಕಿದೆ.

ಮೃಗಾಲಯಕ್ಕೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಕಳೆದ ಜನವರಿ ಒಂದರಂದು ದಾಖಲೆ ರೀತಿಯಲ್ಲಿ ಭೇಟಿ ಕೊಟ್ಟಿದ್ದಾರೆ. ಕಳೆದ ಏ.1ರಿಂದ ಮೃಗಾಲಯ ಪ್ರವೇಶ ದರ ವಯಸ್ಕರಿಗೆ 40 ರೂ.ಗಳಿಂದ 50 ರೂ. ಹಾಗೂ ಮಕ್ಕಳಿಗೆ 20 ರೂ.ನಿಂದ 30 ರೂ.ಗೆ ಹೆಚ್ಚಿಸಲಾಗಿದೆ. ಪಾರ್ಕಿಂಗ್ ಶುಲ್ಕ ಪ್ರತ್ಯೇಕವಿದೆ.

----

ತೇಲುವ ಉದ್ಯಾನ

ಮೃಗಾಲಯ ವ್ಯಾಪ್ತಿಯಲ್ಲಿರುವ ಕಲ್ಯಾಣಿಯಲ್ಲಿ ತೇಲುವ ಉದ್ಯಾನ ಹಾಗೂ ಮೆಡಿಸನ್ ಪ್ಲಾಂಟ್ ನಿರ್ಮಿಸಲು ಚಿಂತಿಸಲಾಗಿದೆ. ಬೇಸಿಗೆಯಲ್ಲಿ ಪ್ರಾಣಿ,ಪಕ್ಷಿಗಳ ಮನೆಗಳು ತಣ್ಣಗಿರಲು ಸ್ಪಿಂಕ್ಲರ್ ವ್ಯವಸ್ಥೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ವೀಕ್ಷಕರಿಗೂ ಬೇಸಿಗೆ ತಾಪ ತಾಕದಂತೆ ಸ್ಪಿಂಕ್ಲರ್ ಅಳವಡಿಸಲು ಯೋಜಿಸಲಾಗಿದೆ.

----

ಹಣಕಾಸು ಸಾಲು/ಆದಾಯ(ಲಕ್ಷ ರೂ.)/ಭೇಟಿ ನೀಡಿದವರ ಸಂಖ್ಯೆ

2020-21 22.39 75164

2021-22 26.11 86969

2022-23 45.35 154278

2023-24 70.94 179479

2024-25 76.51 192772

----

ದತ್ತು ಯೋಜನೆ

ಮೃಗಾಲಯದ ಯೋಜನೆ ಜನಪ್ರಿಯತೆಗೆ ಅಧಿಕಾರಿಗಳು ಕಾಳಜಿ ವಹಿಸಬೇಕಿದೆ. ಹುಲಿ 2, ಚಿರತೆ 5, ಕರಡಿ 5, ನರಿ 7, ಜಿಂಕೆ 11, ನೀಲ್ ಗಾಯ್ 5, ಕೃಷ್ಣಮೃಗ 33, ಹೆಬ್ಬಾವು 3, ಮೊಸಳೆ 2, 200 ಪಕ್ಷಿಗಳ ಸಹಿತ 313 ಪ್ರಾಣಿ, ಪಕ್ಷಿಗಳಿವೆ. ಇವುಗಳನ್ನು ದತ್ತು ಪಡೆಯುವಂತೆ ಪ್ರಾಣಿಪ್ರಿಯರನ್ನು ಇಲಾಖೆ ಮನವರಿಕೆ ಮಾಡಿಕೊಡಬೇಕಿದೆ.

----

ಕೋಟ್

ಮೃಗಾಲಯಕ್ಕೆ ಹೊಸದಾಗಿ ಪ್ರಾಣಿ, ಪಕ್ಷಿಗಳನ್ನು ತರುವ ಉದ್ದೇಶವಿದೆ. ಮತ್ತೊಂದು ಹೊಸ ಸೆಲ್ಫಿ ಪಾಯಿಂಟ್ ನಿರ್ಮಿಸಲಾಗುವುದು. 21 ಎಕರೆ ವಿಸ್ತೀರ್ಣದ ಮೃಗಾಲಯದ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಸಿದ್ಧಪಡಿಸಿ ಕಳಿಸಿರುವ ಮಾಸ್ಟರ್‌ಪ್ಲಾನ್‌ಗೆ ಕೇಂದ್ರೀಯ ಮೃಗಾಲಯ ಪ್ರಾಧಿಕಾರದಿಂದ ಇನ್ನು ಅನುಮತಿ ದೊರೆತಿಲ್ಲ.

ಅಕ್ಷತಾ, ಜೂ ಕ್ಯುರೇಟರ್, ಆರ್‌ಎಫ್‌ಒ. ಆಡುಮಲ್ಲೇಶ್ವರ ಕಿರು ಮೃಗಾಲಯ.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net