ಮೂವರು ಸರಗಳ್ಳರ ಬಂಧನ

kdr police
ಕಳ್ಳರಿಂದ ವಶಪಡಿಸಕೊಂಡ ಸರ ಮತ್ತು ಬೈಕ್‌ಗಳನ್ನು ಕಡೂರು, ಬೀರೂರು ಪೊಲೀಸರು ಪ್ರದರ್ಶಿಸಿದರು. ಸಿಪಿಐಗಳಾದ ರಫೀಕ್, ಶ್ರೀಕಾಂತ್, ಪಿಎಸ್‌ಗಳಾದ ಸಜೀತ್‌ಕುಮಾರ್, ಶಾಹಿದ್ ಅಫ್ರೀದಿ ಇತರರಿದ್ದರು.
Published on

ಕಡೂರು: ತಾಲೂಕಿನ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಒಂದೇ ದಿನ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮಹಿಳೆಯರಿಗೆ ಖಾರದಪುಡಿ ಎರಚಿ ಸರಗಳವು ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಆರೋಪಿಗಳಿಂದ ಸರಗಳು, ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆ ಶಹಬಂದರ್ ಗ್ರಾಮದ ಕಲ್ಮೇಶ್ವರ ಶಿವಪುತ್ರ ಮಠದವರ್, ಬಸವರಾಜ ಸುರೇಶ ಅಗಸಾಗಿ ಮತ್ತು ರಾಜು ಯಲಗುಂಡ ಮಠದವರ್ ಬಂಧಿತ ಆರೋಪಿಗಳು. ಜೂ.29ರ ತಡರಾತ್ರಿ ರಾಣೆಬೆನ್ನೂರಿನಲ್ಲಿ ಪಲ್ಸರ್ ಬೈಕ್ ಕಳವು ಮಾಡಿಕೊಂಡು ಶಿವಮೊಗ್ಗದ ಮೂಲಕ ಕಡೂರಿಗೆ ಬೈಕ್‌ನಲ್ಲಿಯೇ ಆಗಮಿಸಿದ್ದರು. ಜೂ.30 ರಂದು ಕಡೂರು ತಾಲೂಕಿನ ತಂಗಲಿ, ಚಟ್ನಳ್ಳಿ ಗ್ರಾಮ ಹಾಗೂ ಬೀರೂರಿನ ಕುಡ್ಲೂರು ಗೇಟ್ ಬಳಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರ ಕಣ್ಣಿಗೆ ಖಾರದಪುಡಿ ಎರಚಿ ಚಿನ್ನದ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಒಂದು ತಿಂಗಳ ಹಿಂದೆ ಕೂಲಿಕೆಲಸಕ್ಕೆಂದು ಕಡೂರಿಗೆ ಬಂದಿದ್ದ ಆರೋಪಿ ಕಲ್ಮೇಶ್ವರ ಹಬ್ಬಕ್ಕೆಂದು ಊರಿಗೆ ತೆರಳಿದ್ದಾನೆ. ಬಳಿಕ ಬಸವರಾಜ್ ಮತ್ತು ರಾಜು ಇಬ್ಬರು ಸ್ನೇಹಿತರೊಂದಿಗೆ ಹಣದ ಆಸೆಗಾಗಿ ಅಡ್ಡದಾರಿಯ ಮಾರ್ಗದ ಬಗ್ಗೆ ಪೊಲೀಸ್ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.

ಮೂರೂ ಠಾಣೆಗಳ ಪೊಲೀಸರು 55ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ ಆರೋಪಿಗಳ ಮೊಬೈಲ್ ಟ್ರಾೃಕ್‌ಗಳ ಸಹಾಯದಿಂದ ಚಲನವಲನದ ಮಾಹಿತಿ ಪಡೆದು ಬಂಧಿಸಿದ್ದಾರೆ. ಪ್ರಕರಣ ಮರೆಮಾಚುವ ಸಲುವಾಗಿ ಶಿರಾ ಸಮೀಪದ ಬಾವಿಗೆ ಪಲ್ಸರ್ ಬೈಕ್ ಹಾಕಿದ್ದರು.

ಬೀರೂರು ಮತ್ತು ಸಿಂಗಟಗೆರೆ ಠಾಣಾ ವ್ಯಾಪ್ತಿಯ ತಲಾ 20 ಗ್ರಾಂ ಬಂಗಾರದ ಸರ, ಕಡೂರು ಠಾಣಾ ವ್ಯಾಪ್ತಿಯ 21.5 ಗ್ರಾಂ ಚಿನ್ನದ ಸರ ಹಾಗೂ ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಕಾರ್ಯಾಚರಣೆಯಲ್ಲಿ ತರೀಕೆರೆ ಡಿವೈಎಸ್ಪಿ ಹಾಲಮೂರ್ತಿರಾವ್, ಕಡೂರು ಸಿಪಿಐ ರಫೀಕ್, ಬೀರೂರು ಸಿಪಿಐ ಶ್ರೀಕಾಂತ್, ಪಿಎಸ್‌ಐಗಳಾದ ಸಜೀತ್‌ಕುಮಾರ್, ಧನಂಜಯ್, ಲೀಲಾವತಿ, ತಿಪ್ಪೇಶ್, ರಂಗನಾಥ್, ಶಾಹಿದ್ ಅಫ್ರೀದಿ, ಸಿಬ್ಬಂದಿ ಆರ್.ಗಣಪತಿ, ಶೇರುಗಾರ್, ವೇದಮೂರ್ತಿ, ಕೃಷ್ಣಮೂರ್ತಿ, ಹೇಮಂತ್‌ಕುಮಾರ್, ವಸಂತಕುಮಾರ್, ರಾಜು, ರೇಣುಕಮೂರ್ತಿ, ಸಿದ್ದನಾಯಕ, ಮಂಜನಾಯ್ಕ, ಶಿವಕುಮಾರ್, ರಾಜಪ್ಪ, ಮಧುಕುಮಾರ್, ಹರೀಶ್, ಧನಪಾಲನಾಯ್ಕ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net