

ಮೈಸೂರು: ಮೂವರು ಸರಗಳ್ಳರನ್ನು ಸರಸ್ವತಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗಂಗೋತ್ರಿ ಬಡಾವಣೆಯ ಮಹಿಳೆಯೊಬ್ಬರು ಜ.23ರಂದು ಮಾರುತಿ ದೇವಸ್ಥಾನದ ಬಳಿ ಹೋಗುತ್ತಿರುವಾಗ ಸುಮಾರು 30 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸರಸ್ವತಿಪುರಂ ಠಾಣೆ ಪೊಲೀಸರು ಜ.1ರಂದು ಇಬ್ಬರು ಆರೋಪಿಗಳನ್ನು ಬಂಧಿಸಿದರು. ಇವರು ನೀಡಿದ ಮಾಹಿತಿ ಮೇರೆಗೆ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ.
ಮೂವರು ಆರೋಪಿಗಳು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿರುವುದು ಪತ್ತೆಯಾಗಿದೆ. 7 ಸರಗಳ್ಳತನ ಪ್ರಕರಣಗಳಿಗೆ ಸಂಬಂಧಪಟ್ಟಂತೆ 13 ಲಕ್ಷ ರೂ.ಬೆಲೆ ಬಾಳುವ 220 ಗ್ರಾಂ ತೂಕದ ಚಿನ್ನದ ಸರಗಳು, ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಿಂದ ಸರಸ್ವತಿಪುರಂ ಠಾಣೆಯ 3, ವಿಜಯನಗರ ಠಾಣೆಯ 2, ವಿದ್ಯಾರಣ್ಯಪುರಂ ಠಾಣೆಯ -1 ಹಾಗೂ ಹೆಬ್ಬಾಳ ಠಾಣೆಯ 1 ಸರಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.
ಸರಸ್ವತಿಪುರಂ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಗೋವಿಂದರಾಜು, ಸಬ್‌ಇನ್ಸ್‌ಪೆಕ್ಟರ್ ರಮೇಶ್, ಎಎಸ್‌ಐ ಚೌಡಪ್ಪ, ಸಿಬ್ಬಂದಿ ಮೋಹನ್‌ಕುಮಾರ್, ರಾಘವೇಂದ್ರ, ಉಮೇಶ್, ಹರೀಶ್‌ಕುಮಾರ್, ಮಂಜುನಾಥ್, ಕುಮಾರ್, ಸಾಗರ್ ಪತ್ತೆ ಕಾರ್ಯದಲ್ಲಿದ್ದರು.