ಮೂವರು ಸರ ಕಳ್ಳರ ಬಂಧನ: 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ :ಎಸ್ಪಿ

ಮೂವರು ಸರ ಕಳ್ಳರ ಬಂಧನ: 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ :ಎಸ್ಪಿ
Published on

ಹಾಸನ: ಜಿಲ್ಲೆಯಲ್ಲಿ ವಿವಿಧ ಸರ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಯಶಸ್ವಿಯಾಗಿದ್ದು, ಈ ಸಂಬಂಧ ಒಟ್ಟು 7 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ತಿಳಿಸಿದರು.
ಜಿಲ್ಲೆಯಲ್ಲಿ 2011ರಿಂದ 2023ರವಗೆ ಒಟ್ಟು 9 ಪ್ರಕರಣದಲ್ಲಿ ಭಾಗಿಯಾಗಿದ ಮೈಸೂರು ಮೂಲದ ಲಾರಿ ಚಾಲಕ ಸೈಯದ್ ಉಮ್ಮರ್(45) ,ಜ್ಯುಯೆಲ್ಲರಿ ಬ್ಯುಸಿನೆಸ್ ಮಾಡುವ ಹೇಮರಾಂ(ರಾಜಸ್ಥಾನದವನು) ಬಂಧಿತರು.ಮತ್ತೊಂದು ಪ್ರಕರಣದಲ್ಲಿ ಪ್ರವೀಣ್ ಎಂಬ ಆರೋಪಿಯನ್ನು ಬಂಧಿಸಿ ಇವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ತಾಲೂಕಿನ ದುದ್ದ ಹೋಬಳಿ ಹೆರಗು ಗ್ರಾಮದ ಪದ್ಮ ಎಂಬುವರು ಮಗನ ವಿದ್ಯಾಭ್ಯಾಸಕ್ಕಾಗಿ ನಗರದ ಗೌರಿಕೊಪ್ಪಲು ಬಡಾವಣೆಯಲ್ಲಿ ವಾಸವಾಗಿದ್ದರು. ಕಳೆದ ಡಿ.12 ರಂದು ಸಂಜೆ ಬೀರನಹಳ್ಳಿ ಕೆರೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿ ಬೈಕ್‌ನಲ್ಲಿ ಬಂದು 1.50 ಲಕ್ಷ ರೂ. ಬೆಲೆಯ 33 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದ. ಈ ಸಂಬಂಧ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದೇ ದಿನ ನಗರದಲ್ಲಿ ಮೂರು ಕಡೆಗಳಲ್ಲಿ ಸರಣಿ ಸರಗಳ್ಳತನ ನಡೆದಿದ್ದರಿಂದ ಪ್ರಕರಣ ವರದಿಯಾಗಿದ್ದರಿಂದ ಇದರ ಗಂಭೀರತೆ ಅರಿತ ಎಸ್ಪಿ ಮೊಹಮ್ಮದ್ ಸುಜೀತಾ ಅವರು ಎಎಸ್ಪಿ ತಮ್ಮಯ್ಯ ಹಾಗೂ ವೆಂಕಟೇಶ್‌ನಾಯ್ಡು ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಪಿ.ಕೆ.ಮುರುಳೀಧರ್ ನೇತೃತ್ವದಲ್ಲಿ ಬಡಾವಣೆ ಪಿಐ ಸ್ವಾಮಿನಾಥ, ಪಿಎಸ್‌ಐ ಪುನೀತ್ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದರು. ಈ ತಂಡ ಆರೋಪಿ ಉಮ್ಮರ್‌ಬಂಧಿಸಿ ವಿಚಾರಣೆಗೆ ಒಳಪಡಿಸಿದರು ಈ ವೇಳೆ ಕದ್ದ ಚಿನ್ನಾಭರಣವನ್ನು ಮೈಸೂರಿನ ಸಂತೋಷ್ ಗೋಲ್ಡ್ ಪ್ಯಾಲೇಸ್ ಚಿನ್ನಬೆಳ್ಳಿ ವ್ಯಾಪಾರಿ ಹೇಮರಾಂಗೆ ನೀಡಿ ಹಣ ಪಡೆದುಕೊಳ್ಳುತ್ತಿದ್ದ ಎಂದು ಇಬ್ಬರೂ ತಪ್ಪೊಪ್ಪಿಕೊಂಡಿದ್ದಾರೆ ಎಂದರು.
ಈ ಆರೋಪಿಗಳ ವಿರುದ್ಧ ಒಟ್ಟು 9 ಪ್ರಕರಣಗಳು ದಾಖಲಾಗಿದ್ದು, ಹಾಸನ ಬಡಾವಣೆ ಠಾಣೆಯಲ್ಲಿ 4 ಪ್ರಕರಣ, ಪೆನ್‌ಷನ್ ಮೊಹಲ್ಲಾ ಠಾಣೆಯಲ್ಲಿ 3 ಪ್ರಕರಣಗಳು, ಹಾಸನ ನಗರ ಪೊಲಿಸ್ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಎಸ್‌ಪಿಗಳಾದ ಎಎಸ್ಪಿ ತಮ್ಮಯ್ಯ ಹಾಗೂ ವೆಂಕಟೇಶ್‌ನಾಯ್ಡು ಇದ್ದರು.

ಒಂದೇ ದಿನದಲ್ಲಿ ಅಂದರ್:
ಮತ್ತೊಂದು ಪ್ರಕರಣದಲ್ಲಿ 1.50 ಲಕ್ಷರೂ. ಬೆಲೆಯ 30 ಗ್ರಾಂ.ನ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯನ್ನೂ ಬಂಧಿಸಲಾಗಿದೆ. ಆಲೂರು ತಾಲೂಕು ಮಾದಿಹಳ್ಳಿ ಗ್ರಾಮದ ಪ್ರವೀಣ್ ಬಂಧಿತ ಆರೋಪಿ. ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಈತ ಜ.3 ರಂದು ಮಧ್ಯಾಹ್ನ ಸತ್ಯಮಂಗಲ ಮೂರನೇ ಕ್ರಾಸ್ ನಿವಾಸಿ ದೇವಮ್ಮ ಅವರು ಮನೆಯ ಬಾಗಿಲು ಬಳಿ ಕುಳಿತಿದ್ದಾಗ ಕಪ್ಪು ಬಣ್ಣದ ಬಟ್ಟೆ ಧರಿಸಿ ಬೈಕ್‌ನಲ್ಲಿ ಬಂದ ಪ್ರವೀಣ್, ಏಕಾಏಕಿ ಮನೆಯೊಳಗೆ ನುಗ್ಗೆ ಒಬ್ಬರೇ ಇದ್ದ ದೇವಮ್ಮ ಅವರ ಕೊರಳಿನಲ್ಲಿದ್ದ 30 ಗ್ರಾಂ. ತೂಕದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದ. ಪಕ್ಕದ ಮನೆ ನಿವಾಸಿ ಸಂಪತ್ ಎಂಬುವರು ಕೂಗಾಡಿದ ಶಬ್ದ ಕೇಳಿ ಆರೋಪಿ ಪರಾರಿಯಾಗಿದ್ದ.ನಂತರ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ದೇವಮ್ಮ ಅವರ ಮೊಮ್ಮಗ ಬಡಾವಣೆ ಪೊಳೀಸರಿಗೆ ದೂರು ನೀಡಿದ್ದ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು ಒಂದೇ ದಿನದಲ್ಲಿ ಸರಗಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್‌ಪಿ ತಿಳಿಸದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net