ಮೂವರು ಯುವಕರು ನೀರುಪಾಲು; ಸ್ನೇಹಿತನ ಹುಟ್ಟುಹಬ್ಬಕ್ಕೆಂದು ತೆರಳಿದ್ದರು ತಿಪ್ಪಗಾನಹಳ್ಳಿ ಕೆರೆಯಲ್ಲಿ ಅವಘಡ ಇಂದು ಕಾರ್ಯಾಚರಣೆ

25Rural1...
Published on

ದೊಡ್ಡಬಳ್ಳಾಪುರ ಗ್ರಾಮಾಂತರ: ಕರೊನಾ ನಡುವೆಯೂ ಸ್ನೇಹಿತನ ಹುಟ್ಟುಹಬ್ಬ ಆಚರಣೆಗೆಂದು ಬಂದಿದ್ದ ಮೂವರು ಯುವಕರು ತೂಬಗೆರೆ ಹೋಬಳಿಯ ತಿಪ್ಪಗಾನಹಳ್ಳಿ ಕೆರೆಯಲ್ಲಿ ಈಜಲು ಹೋಗಿ ಸೋಮವಾರ ಸಂಜೆ ಮುಳುಗಿ ಮೃತಪಟ್ಟಿದ್ದಾರೆ.

ಬೆಂಗಳೂರಿನ ರಾಮಮೂರ್ತಿನಗರ ನಿವಾಸಿಗಳಾದ ರಾಜು (19), ಚಂದ್ರು (20) ಮತ್ತು ನವೀನ್ (24) ಮೃತರು. ಚಂದ್ರು ಹುಟ್ಟುಹಬ್ಬದ ನಿಮಿತ್ತ ನಾಲ್ವರು ಯುವಕರು ಹಾಗೂ ನಾಲ್ವರು ಯುವತಿಯರು 4 ಬೈಕ್‌ಗಳಲ್ಲಿ ಬಂದಿದ್ದಾರೆ. ಬೆಂಗಳೂರಿನ ಹೆಣ್ಣೂರು ಕ್ರಾಸ್ ಬಳಿಯಿಂದ ಬೆಳಗ್ಗೆ 11 ಗಂಟೆ ಹೊರಟು ಘಾಟಿ ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ.

ಸಂಜೆ 4 ಗಂಟೆ ಸುಮಾರಿಗೆ ತಿಪ್ಪಗಾನಹಳ್ಳಿ ಕೆರೆ ಬಳಿ ಬಂದು ಈಜಲು ಮುಂದಾಗಿದ್ದಾರೆ. ಮೊದಲಿಗೆ ಚಂದ್ರು ನೀರಿಗೆ ಇಳಿದು, ಮುಳುಗಿದ್ದಾನೆ. ಈ ವೇಳೆ ರಾಜು, ನವೀನ್ ರಕ್ಷಣೆ ಧುಮುಕಿದ್ದು, ಅವರೂ ಮೇಲೆ ಬಂದಿಲ್ಲ. ಭಯಗೊಂಡ ಉಳಿದ ಸ್ನೇಹಿತರು ಕಿರುಚಾಡಿದ್ದಾರೆ. ಶಬ್ದ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರು ಕೆರೆಗಿಳಿದರೂ ಯುವಕರ ಗುರುತು ಪತ್ತೆಯಾಗಿಲ್ಲ. ಬಳಿಕ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಡುಕಾಟಕ್ಕೆ ಅಡ್ಡಿಯಾದ ಕೆಸರು: ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಮುಳುಗು ತಜ್ಞರು ರಾತ್ರಿ 8 ಗಂಟೆವರೆಗೂ ಕಾರ್ಯಾಚರಣೆ ನಡೆಸಿದರು. ಯುವಕರ ದೇಹಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ಮಂಗಳವಾರ ಬೆಳಗ್ಗೆ ಪುನಃ ಮುಂದುವರಿಸಲಿದ್ದಾರೆ. ಕೆರೆಯಲ್ಲಿ ನೀರು ತುಂಬಿರುವ ಜತೆಗೆ ಗಿಡ-ಗಂಟಿ ಬೆಳೆದಿವೆ. ಅಪಾರ ಪ್ರಮಾಣದಲ್ಲಿ ಕೆಸರು ತುಂಬಿರುವುದರಿಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುವುದು ಸವಾಲಾಗಿದೆ.

ಪಾಲಕರ ಆಕ್ರಂದನ: ಯುವಕರು ನೀರುಪಾಲದ ಬಗ್ಗೆ ದೊರೆತ ಮಾಹಿತಿ ಮೇರೆಗೆ ಸ್ಥಳಕ್ಕಾಮಿಸಿದ ಯುವಕರ ಪಾಲಕರು ಹಾಗೂ ಜತೆಯಲ್ಲಿದ್ದ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು. ಮೂವರು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಮೂಲಕ ಕುಟುಂಬಗಳಿಗೆ ಆಧಾರವಾಗಿದ್ದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net