

ಹುಬ್ಬಳ್ಳಿ: ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಮಲಪ್ರಭಾ ಕಾಲುವೆಗೆ ಹಾರಿದ ಮೂವರು ಯುವಕರು ನೀರು ಪಾಲಾದ ಘಟನೆ ತಾಲೂಕಿನ ಕಿರೇಸೂರ ಗ್ರಾಮದ ಬಳಿ ಶುಕ್ರವಾರ ನಡೆದಿದೆ. ಯುವತಿಯೊಬ್ಬಳನ್ನು ಸ್ಥಳೀಯ ಕುರಿಗಾಹಿಗಳು ರಕ್ಷಿಸಿದ್ದಾರೆ.
ಹುಬ್ಬಳ್ಳಿಯ ಆರ್ಜಿಎಸ್, ಗಾಂಧಿವಾಡ ನಿವಾಸಿ ಜೋಶ್ ಕ್ಲೆಮೆಂಟ್ ಜಂಗಮ (21), ಸನ್ನಿ ಜಾನ್ಸನ್ ಕಲ್ಲಕುಂಟ್ಲ (21) ಪುಣೆ ಮೂಲದ ಗಜಾನನ ರಾಜಶೇಖರ (21) ನೀರು ಪಾಲಾದವರು. ವಿದ್ಯಾನಗರ ಸಿಮೆಂಟ ಚಾಳನ ನತಾಶಾ ಯುವರಾಜ ಭಂಡಾರಿ (19) ಹಾಗೂ ನವೀನ ಪಾರ್ಕ್ನ ಸಲ್ಮಾನ ಪಿಳ್ಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ವಿವರ: ಜೋಶ್ ಮತ್ತು ನತಾಶಾ ಮದುವೆ ನಿಶ್ಚಯವಾಗಿತ್ತು. ಫೋಟೋ ಶೂಟ್ಗಾಗಿ ಸ್ನೇಹಿತರೊಂದಿಗೆ ಸೇರಿ ಇಬ್ಬರೂ ಮಲಪ್ರಭಾ ಕಾಲುವೆ ಬಳಿ ಬಂದಿದ್ದರು. ಸೇತುವೆ ಬಳಿ ನಿಂತು ಫೋಟೋ ತೆಗೆದುಕೊಳ್ಳುತ್ತಿರುವಾಗ ಏಕಾಏಕಿ ಹೆಜ್ಜೇನು ದಾಳಿ ನಡೆಸಿವೆ. ಹೆಜ್ಜೇನಿನಿಂದ ರಕ್ಷಿಸಿಕೊಳ್ಳಲು, ಜೋಶಿ, ಸನ್ನಿ, ಗಜಾನನ ಹಾಗೂ ನತಾಶಾ ಸೇತುವೆ ಮೇಲಿಂದ ನೀರಿಗೆ ಹಾರಿದ್ದಾರೆ. ಪಕ್ಕದಲ್ಲೇ ಇದ್ದ ಕುರಿಗಾಹಿಗಳು ನೀರಿಗೆ ಜಿಗಿದು ನತಾಶಾಳನ್ನು ರಕ್ಷಿಸಿದ್ದಾರೆ. ಉಳಿದ ಮೂವರು ನೀರು ಪಾಲಾಗಿದ್ದಾರೆ. ಸಲ್ಮಾನ್ ನೀರಿಗೆ ಹಾರದೆ ಪಾರಾಗಿದ್ದಾನೆ. ಸ್ಥಳಕ್ಕೆ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ, ಡಿವೈಎಸ್ಪಿ ಎಂ.ಬಿ. ಸಂಕದ, ಗ್ರಾಮೀಣ ಇನ್ಸ್ಪೆಕ್ಟರ್ ರಮೇಶ ಗೋಕಾಕ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಅಗ್ನಿಶಾಮಕ ಸಿಬ್ಬಂದಿ ನೀರು ಪಾಲಾದವರಿಗಾಗಿ ರಾತ್ರಿವರೆಗೆ ಹುಡುಕಾಟ ನಡೆಸಿದರು.
ಪಾಲಿಕೆ ಮಾಜಿ ಸದಸ್ಯೆ ಪುತ್ರ: ಸನ್ನಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಸುವರ್ಣ ಕಲ್ಲಕುಂಟ್ಲ ಪುತ್ರ.</