

ಹುಬ್ಬಳ್ಳಿ: ಭಾರತ ಲಾಕ್ಡೌನ್ ಹಿನ್ನೆಲೆಯಲ್ಲಿ ಇಲ್ಲಿನ ಹೊಸ ಗಬ್ಬೂರಿನ ಸರ್ಕಾರಿ ಮದ್ಯದಂಗಡಿಗೆ ಶನಿವಾರ ನಸುಕಿನ ಜಾವ ಕನ್ನ ಹಾಕಿ ಲಕ್ಷಾಂತರ ರೂ. ಮೌಲ್ಯದ ಮದ್ಯ ಹಾಗೂ 40 ಸಾವಿರ ರೂ. ನಗದು ಕದ್ದು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬೆಂಡಿಗೇರಿ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಇಲ್ಲಿನ ಬಂಕಾಪುರ ಚೌಕ ವಾಳ್ವೇಕರ ಹಕ್ಕಲ ನಿವಾಸಿ ಅರ್ಜುನ ದೊಡ್ಡಮನಿ, ಪಾಟೀಲ ಗಲ್ಲಿಯ ಮಲ್ಲಿಕಾರ್ಜುನ ಜಾಧವ ಹಾಗೂ ವಾಸು ಶಿವಳ್ಳಿ ಬಂಧಿತರು. ಅವರಿಂದ 1 ಲಕ್ಷ ರೂ. ಮೌಲ್ಯದ 10 ಬಾಕ್ಸ್ ಮದ್ಯ, 2 ಬೈಕ್ ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ವೀರಾಪುರ ಓಣಿಯ ರಾಜು ಬಿಲಾನಾ ತಲೆಮರೆಸಿ ಕೊಂಡಿದ್ದಾನೆ. ಹೊಸ ಗಬ್ಬೂರಿನ ಎಂಎಸ್ಐಎಲ್ ಮಳಿಗೆಯ ಶರ್ಟರ್ಸ್ ಮುರಿದು 18 ಬಾಕ್ಸ್ ಮದ್ಯ ಹಾಗೂ 40 ಸಾವಿರ ರೂ. ನಗದು ಕದ್ದು ಪರಾರಿಯಾಗಿದ್ದರು. ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್ಪೆಕ್ಟರ್ ಅರುಣಕುಮಾರ ಸಾಳುಂಕೆ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಕಳ್ಳತನ ಮಾಡಿ ಹೆಚ್ಚಿನ ಬೆಲೆಗೆ ಮದ್ಯ ಮಾರಾಟಕ್ಕೆ ಮುಂದಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮ ಮದ್ಯ ಮಾರಾಟ: ಅಮರಗೋಳ ಕ್ರಾಸ್ ಬಳಿ ಸೋಮವಾರ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಎಪಿಎಂಸಿ- ನವನಗರ ಠಾಣೆ ಪೊಲೀಸರು 7,128 ರೂ. ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ. ನವನಗರ ನಿವಾಸಿ, ಪಾನ್ಶಾಪ್ ಅಂಗಡಿ ಇಟ್ಟುಕೊಂಡಿದ್ದ ಶ್ರೀಕಾಂತಯ್ಯ ಶಿವಯ್ಯ ಮೂಗನೂರಮಠ ಬಂಧಿತ ಆರೋಪಿ. ಲಾಕ್ಡೌನ್ ಇದ್ದರೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಶ್ರೀಕಾಂತಯ್ಯನಿಗೆ ಮದ್ಯ ಸರಬರಾಜು ಮಾಡಿದ್ದ ಪ್ರಶಾಂತ ಭೋಜರಾಜ ಶೆಟ್ಟಿ ಎಂಬಾತ ತಲೆಮರೆಸಿಕೊಂಡಿದ್ದಾನೆ. ಎಪಿಎಂಸಿ- ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.