ಮೂವರು ಪೊಲೀಸರ ಅಮಾನತು

Police Suspended
Published on

ಮೈಸೂರು: ಕೊಲೆಯಾದ ಮಹಿಳೆ ಬದುಕಿ ಬಂದ ಪ್ರಕರಣದಲ್ಲಿ ಅಮಾಯಕನನ್ನು ಜೈಲಿಗೆ ಕಳುಹಿಸಿದ್ದ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಕುಶಾಲನಗರ ಸಿಪಿಐ ಬಿ.ಜಿ. ಪ್ರಕಾಶ್, ಇಲವಾಲ ಠಾಣೆ ಎಸ್‌ಐ ಮಹೇಶ್‌ಕುಮಾರ್ ಮತ್ತು ಜಯಪುರ ಠಾಣೆ ಎಸ್‌ಐ ಪ್ರಕಾಶ್ ಎತ್ತಿನಮನೆ ಅಮಾನತುಗೊಂಡವರು.

ಈ ಮೂವರು ಅಧಿಕಾರಿಗಳು ಈ ಹಿಂದೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಸುಳ್ಳು ಕೇಸ್ ಹಾಕಿ ಅಮಾಯಕನ ವಿರುದ್ಧ ಸುಳ್ಳು ಚಾರ್ಜ್‌ಶೀಟ್ ಹಾಕಿ ಜೈಲಿಗೆ ಕಳುಹಿಸಿದ್ದರು. ಇದು ಕಳೆದ ಏಪ್ರಿಲ್ 2ರಂದು ಬೆಳಕಿಗೆ ಬಂದಿತ್ತು. ಕುಶಾಲನಗರದ ಬಸವನಹಳ್ಳಿ ಹೊಸ ಬಡಾವಣೆಯ ನಿವಾಸಿ ಗಾಂಧಿ ಅವರ ಪುತ್ರ ಸುರೇಶ ವಿರುದ್ಧ ಸುಳ್ಳು ಕೇಸ್ ದಾಖಲಿಸಲಾಗಿತ್ತು. ಈತ ತನ್ನ ಪತ್ನಿ ಮಲ್ಲಿಗೆ ಕೊಲೆ ಮಾಡಿರುವುದಾಗಿ ಬೆಟ್ಟದಪುರ ಠಾಣೆ ಇನ್ಸ್ ಪೆಕ್ಟರ್ ಬಿ.ಜಿ.ಪ್ರಕಾಶ್ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆಯು ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿತ್ತು. ‘ನಾನು ನನ್ನ ಪತ್ನಿಯನ್ನು ಕೊಂದಿಲ್ಲ. ಆಕೆ ಬದುಕಿದ್ದಾಳೆ’ ಎಂದು ಸುರೇಶ್ ಪದೇ ಪದೆ ನ್ಯಾಯಾಲಯ ಎದುರು

ಕೋರಿಕೊಂಡಿದ್ದರು. ಅಲ್ಲದೆ ‘ನಮ್ಮ ತಾಯಿ ಬದುಕಿದ್ದಾಳೆ. ನಮ್ಮ ತಾಯಿ ಸತ್ತಿಲ್ಲ’ ಎಂದು ಆಕೆಯ ಮಕ್ಕಳಾದ ಕೃಷ್ಣ ಮತ್ತು ಕೀರ್ತಿ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದರು. ಅಲ್ಲದೆ ‘ಆಕೆ ಸತ್ತಿಲ್ಲ’ ಎಂದು ಅಕ್ಕಪಕ್ಕದ ಮನೆಯವರೂ ಸಾಕ್ಷ್ಯ ನುಡಿದಿದ್ದರು.

ಈ ನಡುವೆ ಏ.2ರಂದು ಸತ್ತಿದ್ದಾಳೆ ಎಂದು ಭಾವಿಸಿದ್ದ ಮಹಿಳೆ ಬಂದು ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು. ಇದರಿಂದ ಕೇಸ್ ಬಿದ್ದು ಹೋಗಿತ್ತು. ಪತ್ನಿಯನ್ನು ಕೊಲೆ ಮಾಡಿದ ಆರೋಪ ಹೊತ್ತು ಎರಡು ವರ್ಷ ಕಾಲ ಜೈಲಿನಲ್ಲಿದ್ದ ಸುರೇಶ್ ನಂತರ ನಿರಪರಾಧಿಯಾಗಿ ಬಿಡುಗಡೆಗೊಂಡಿದ್ದರು.

ಈ ನಡುವೆ, ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವು ಸೂಚಿಸಿತ್ತು. ಹೀಗಾಗಿ, ಸುಳ್ಳು ಕೇಸ್ ಹಾಕಿದ್ದ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಮೈಸೂರು ದಕ್ಷಿಣ ವಲಯ ಡಿಐಜಿ ಡಾ.ಎಂ.ಬಿ.ಬೋರಲಿಂಗಯ್ಯ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net