ಮೂವರು ಡಿಸಿಎಂ ಮಾಡುವುದು ಹೈಕಮಾಂಡ್‌ಗೆ ಬಿಟ್ಟದ್ದು:ಶಾಸಕ ಕೆ.ಎಂ.ಶಿವಲಿಂಗೇಗೌಡ

ಮೂವರು ಡಿಸಿಎಂ ಮಾಡುವುದು ಹೈಕಮಾಂಡ್‌ಗೆ ಬಿಟ್ಟದ್ದು:ಶಾಸಕ ಕೆ.ಎಂ.ಶಿವಲಿಂಗೇಗೌಡ
Published on

ಹಾಸನ: ಜಾತಿಗೊಂದರಂತೆ ಮೂರು ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಹೈಕಮಾಂಡ್‌ಗೆ ಅನ್ನಿಸಿದರೆ ನೀಡಲಿ. ಎಲ್ಲಾ ಜನಾಂಗಕ್ಕೂ ಸಹಾಯ, ಅನುಕೂಲವಾಗುತ್ತದೆ ನಮ್ಮದೇನು ಅಭ್ಯಂತರವಿಲ್ಲ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ಕಡೆ ಮೂರು ಡಿಸಿಎಂ ಆಗಬೇಕು ಎನ್ನುತ್ತಾರೆ, ಈಗ ಒಬ್ಬರು ಡಿಸಿಎಂ ಇದ್ದಾರೆ. ಮೂರು ಡಿಸಿಎಂ ಬೇಕು ಎಂದು ಹೈಕಮಾಂಡ್ ಬಯಸಿದರೆ ಆಗುತ್ತದೆ. ಮೂರು ಡಿಸಿಎಂಗಳಿದ್ದರೆ ಆಡಳಿತ ಇನ್ನೂ ಸುಧಾರಣೆಯಾಗುತ್ತೆ. ಆದರೆ ಯಾವುದೇ ತೀರ್ಮಾನ ಆಗಬೇಕಾದರೂ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದರು.

ಲೋಕಸಭೆ ಚುನಾವಣೆಗೆ ಅನುಕೂಲವಾಗುತ್ತೆ ಎಂದು ಸಚಿವ ಕೆ.ಎನ್.ರಾಜಣ್ಣ ಅವರು ಹೇಳಿಕೆ ನೀಡಿದ್ದಾರೆ. ಆದರೆ, ಪಕ್ಷ ಅದನ್ನು ಯಾವ ರೀತಿ ತೆಗೆದುಕೊಂಡು ಯಾವ ರೀತಿ ತೀರ್ಮಾನ ಮಾಡುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಅನುಕೂಲ ಎಂಬುದು ಕೆಲವರ ಅಭಿಪ್ರಾಯ, ಆದರೆ ಅಂತಿಮ ತೀರ್ಮಾನ ಹೈಕಮಾಂಡ್‌ಗೆ ಬಿಟ್ಟದ್ದು, ನನ್ನ ವೈಯುಕ್ತಿಕ ಅಭಿಪ್ರಾಯ ಹೇಳುವುದಾದರೆ ಮೂವರು ಡಿಸಿಎಂ ಮಾಡುವುದರಿಂದ ಪಕ್ಷ ಸಂಘಟನೆ ಅನುಕೂಲವಾಗುತ್ತದೆ. ಅದೇ ರೀತಿ ಒಬ್ಬರೆ ಡಿಸಿಎಂ ಇದ್ದರೆ ಅಧಿಕಾರ ಬಿಗಿಯಾಗಿ ಇರುತ್ತೆ. ಯಾವ ರೀತಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದು ಪಕ್ಷಕ್ಕೆ ಬಿಟ್ಟದ್ದು. ಬಿಜೆಪಿ ಸರ್ಕಾರದಲ್ಲಿ ಮೂರು ಜನ ಡಿಸಿಎಂ ಮಾಡಿದ್ದರು, ಮುಂದೆ ಅದನ್ನು ತೆಗೆದು ಹಾಕಿದರು. ನಮ್ಮ ಪಕ್ಷದಲ್ಲಿ ಯಾವ ರೀತಿ ಮಾಡುತ್ತಾರೆ ನೋಡಬೇಕು ಎಂದರು.

ಬಿಎಸ್‌ವೈ ಹೋರಾಟ ಮಾಡಲಿ:

ರಾಜ್ಯ ಸರ್ಕಾರ ವೈಫಲ್ಯ ಕಂಡಿದೆ ಹೋರಾಟ ಮಾಡುತ್ತೇವೆ ಎಂಬ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಅವರು ಆಗಿಂದ್ದಾಗೆ ಮಾತನಾಡುತ್ತಲೆ ಇರುತ್ತಾರೆ, ಪ್ರವಾಸ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ, ಯಾವತ್ತು ಪ್ರವಾಸ ನಿಲ್ಸಿದ್ದಾರೆ? ಪ್ರವಾಸ ಮಾಡುತ್ತಲೆ ಇದ್ದಾರೆ ಮಾಡಲಿ. ರಾಜ್ಯ ಸರ್ಕಾರ ಉತ್ತಮವಾಗಿ ಕೆಲಸ ಮಾಡಿದೆಯೋ ಇಲ್ಲವೋ ಎಂಬುವುದು ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ, ಲೋಕಸಭೆ ಚುನಾವಣೆಯಲ್ಲಿ ಗೊತ್ತಾಗುತ್ತದೆ. ಯಡಿಯೂರಪ್ಪ ಅವರನ್ನು ಸಂಘಟನೆ ಮಾಡಬೇಡಿ ಎಂದು ಯಾರು ಹಿಡಿದುಕೊಂಡಿಲ್ಲ. ಅವರ ಪಕ್ಷ ಯತ್ನಾಳ್ ಅವರೇ, ಬಿ.ಎಸ್.ಯಡಿಯೂರಪ್ಪ ಅವರು ಬೇಡ, ಅವರು ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಮೈತ್ರಿ ಬಗ್ಗೆ ಕಾದು ನೋಡೋಣ:

ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ದೇವೇಗೌಡರು ಈ ರಾಷ್ಟ್ರದ ಪ್ರಧಾನಮಂತ್ರಿಯಾಗಿ ಇಳಿದು ಬರಬೇಕಾದರೆ ವಾಜಪೇಯಿ ಅವರು ಪತ್ರ ಕಳುಹಿಸಿ, ನಾನು ನಿಮಗೆ ಬೆಂಬಲ ನೀಡುತ್ತೇನೆ, ನೀವು ಪ್ರಧಾನಿಯಾಗಿ ಮುಂದುವರಿ ಎಂದು ಹೇಳಿದರು. ಆಗ ದೇವೇಗೌಡರು ನಾನು ಮತ್ತೆ ಧೂಳಿನಿಂದ ಬರುತ್ತೇನೆ ಹೊರತು ನಿಮ್ಮ ಪಕ್ಷದಿಂದ ಪ್ರಧಾನಿಯಾಗಿ ಆ ಕಳಂಕ ಹೊತ್ತುಕೊಳ್ಳುವುದಿಲ್ಲ ಎಂದು ತಿರಸ್ಕಾರ ಮಾಡಿದರು.

ಪ್ರಧಾನಮಂತ್ರಿ ಸ್ಥಾನ ಬಿಟ್ಟು ಬರುವ ಸಂದರ್ಭದಲ್ಲಿ ಅವರು ಆಡಿದ ಪ್ರತಿಜ್ಞಾ ಮಾತು ಏನಾಯಿತು. ಗೌಡರು ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಮುಂದೆ ಕಾದುನೋಡೋಣ. ಅವರು ಬಹಳ ಪ್ರಬುದ್ಧರು, ಜಾತಿ ವ್ಯವಸ್ಥೆಯನ್ನ ವಿರೋಧ ಮಾಡಿಕೊಂಡು ತಮ್ಮ ರಾಜಕಾರಣ ಸೃಷ್ಟಿಸಿಕೊಂಡು ಪ್ರಧಾನಮಂತ್ರಿ ಆದವರು, ಮೈತ್ರಿಯಿಂದ ಕಾಂಗ್ರೆಸ್‌ಗೆ ಯಾವ ರೀತಿಯಲ್ಲೂ ಪರಿಣಾಮ ಬೀರುವುದಿಲ್ಲ. ಚುನಾವಣೆ ರಂಗಕ್ಕೆ ಬಂದಮೇಲೆ ಜನಾಭಿಪ್ರಾಯ ಗೊತ್ತಾಗುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net