ಮೂವರು ಕ್ಷಯರೋಗಿಗಳನ್ನು ದತ್ತು ಪಡೆದ ಡಿಸಿ

17CBP6 (1)
Published on

ಚಿಕ್ಕಬಳ್ಳಾಪುರ: ಜಿಲ್ಲೆಯ ಮೂವರು ಕ್ಷಯರೋಗಿಗಳನ್ನು ಜಿಲ್ಲಾಧಿಕಾರಿ ಆರ್.ಲತಾ ದತ್ತು ಪಡೆದುಕೊಂಡಿದ್ದು, ಕಾಯಿಲೆ ಸಂಪೂರ್ಣವಾಗಿ ವಾಸಿಯಾಗುವವರೆಗೂ ವೈದ್ಯಕೀಯ ಸೌಲಭ್ಯ, ಪೌಷ್ಟಿಕ ಆಹಾರ ಪೂರೈಕೆ ಸೇರಿ ಇತರ ಅಗತ್ಯ ಖರ್ಚಿನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ಕೇಂದ್ರದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಕ್ಷಯ ರೋಗ ವೇದಿಕೆ ಕಾರ್ಯಕ್ರಮದಲ್ಲಿ ಕ್ಷಯ ರೋಗ ನಿರ್ಮೂಲನೆ ಕುರಿತು ಅರಿವು ಮೂಡಿಸುವ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸುವ ಸಂದರ್ಭದಲ್ಲಿ ದತ್ತು ಸ್ವೀಕಾರ ಘೋಷಣೆ ಮಾಡಿದರು.ಕ್ಷಯ ರೋಗಿಗಳೊಂದಿಗೆ ಆರೋಗ್ಯದ ಬಗ್ಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿ, ರಾಜ್ಯದಲ್ಲಿ ಕ್ಷಯರೋಗವನ್ನು ನಿರ್ಮೂಲನೆಗೊಳಿಸಲು ರಾಜ್ಯ ಮತ್ತು ಜಿಲ್ಲಾಮಟ್ಟದ ಕ್ಷಯ ವೇದಿಕೆ ಕಾರ್ಯಕ್ರಮ ರಚಿಸಲಾಗಿದೆ. ಇದರ ಮೂಲಕ ಕ್ಷಯರೋಗ ನಿರ್ಮೂಲನೆ ಕುರಿತಂತೆ ಅರಿವು ಮೂಡಿಸುವ ಕಾರ್ಯಕ್ರಮಗಳು ಹಾಗೂ ಚಟುವಟಿಕೆ ಕೈಗೊಳ್ಳಲಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಕಳೆದ 2021ನೇ ಸಾಲಿನಿಂದ ಚಿಕಿತ್ಸೆ ಪಡೆಯುತ್ತಿರುವ ಕ್ಷಯರೋಗಿಗಳ 2,800 ಸಂಪರ್ಕಿತರಿಗೆ ಕ್ಷಯರೋಗ ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ 73 ಜನರಿಗೆ ಕ್ಷಯ ದೃಢಪಟ್ಟಿದೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ ಇಗ್ಲಾ ಪ್ರಯೋಗಶಾಲೆ ಕಾರ್ಯನಿರ್ವಹಿಸುತ್ತಿದೆ ಎಂದರು.

ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ವೈದ್ಯಾಧಿಕಾರಿಗಳಾದ ಶಿವಕುಮಾರ್, ಚನ್ನಕೇಶವ, ಆರೋಗ್ಯ ಶಿಕ್ಷಣಾಧಿಕಾರಿ ಜಿ.ಹರೀಶ್ ಮತ್ತಿತರರು ಇದ್ದರು.

14 ಗ್ರಾಪಂಗಳ ಆಯ್ಕೆ: ಜಿಲ್ಲೆಯಲ್ಲಿ ಕ್ಷಯರೋಗವನ್ನು 2025ರೊಳಗೆ ಸಂಪೂರ್ಣವಾಗಿ ನಿಯಂತ್ರಣ ಮಾಡುವ ಉದ್ದೇಶದಿಂದ ಕ್ಷಯ ವೇದಿಕೆಯು 14 ಗ್ರಾಪಂಗಳನ್ನು ಆಯ್ಕೆ ಮಾಡಿಕೊಂಡಿವೆ.ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ಹಾಗೂ ಅಗಲಗುರ್ಕಿ, ಚಿಂತಾಮಣಿಯ ಕೋನಂಪಲ್ಲಿ ಹಾಗೂ ಕಾಗತಿ, ಗೌರಿಬಿದನೂರಿನ ಕಾದಲವೇಣಿ ಹಾಗೂ ಹುಡಗೂರು, ಬಾಗೇಪಲ್ಲಿಯ ಪರಗೋಡು ಹಾಗೂ ದೇವರ ಗುಡಿಪಲ್ಲಿ, ಶಿಡ್ಲಘಟ್ಟದ ದೊಡ್ಡತೇಕಹಳ್ಳಿ ಹಾಗೂ ಸಾದಲಿ, ಗುಡಿಬಂಡೆಯ ಬೀಚಗಾನಹಳ್ಳಿ ಹಾಗೂ ತಿರುಮಣಿ, ಮಂಚೇನಹಳ್ಳಿ ತಾಲೂಕಿನ ಮಂಚೇನಹಳ್ಳಿ ಹಾಗೂ ತಿರುಮಣಿ ಗ್ರಾ.ಪಂ.ಗಳನ್ನು ಮೊದಲ ಹಂತದಲ್ಲಿ ಕ್ಷಯ ಮುಕ್ತ ಪ್ರದೇಶವನ್ನಾಗಿಸುವ ಗುರಿ ಹೊಂದಲಾಗಿದೆ.

ನಿಕ್ಷಯ ನೋಂದಣಿ ಅನುಕೂಲ: ಕ್ಷಯ ರೋಗಿಯು ಸರ್ಕಾರದ ನಿಕ್ಷಯವೆಬ್ ಮೂಲಕ ನೋಂದಣಿ ಸಂಖ್ಯೆ ಪಡೆದರೆ ವೈಜ್ಞಾನಿಕವಾಗಿ ಸೂಕ್ತ ರೀತಿಯ ಚಿಕಿತ್ಸೆ ಪಡೆಯಬಹುದಾಗಿದೆ. ಈ ತಂತ್ರಾಂಶದಲ್ಲಿ ರೋಗಿಯ ಚಿಕಿತ್ಸೆ, ಚಿಕಿತ್ಸಾ ನಂತರದ ಪರೀಕ್ಷೆ ಸೇರಿ ಅಗತ್ಯ ಮಾಹಿತಿ ದಾಖಲಿಸಲಾಗುತ್ತದೆ. ಇದರಿಂದ ರೋಗಿಯು ದೇಶದ ಯಾವುದೇ ಭಾಗದಲ್ಲಾದರೂ ನೋಂದಣಿ ಸಂಖ್ಯೆಯ ಮೂಲಕ ಚಿಕಿತ್ಸೆ ಪಡೆದುಕೊಳ್ಳಬಹುದು. ಇನ್ನು ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕ್ಷಯ ರೋಗಿಗೆ ಉತ್ತಮ ಆಹಾರ, ಪೋಷಣೆಗೆ ಪ್ರತಿ ತಿಂಗಳು 500 ರೂಪಾಯಿ ನೀಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net