

ಬೀದರ್: ಹಣ ಕೀಳುವ ಉದ್ದೇಶದಿಂದ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಮೂವರನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಮೈಲೂರು ಶಾಸ್ತ್ರಿ ನಗರದ ನಾರಾಯಣರಾವ ಬಿರಾದಾರ (61) ಎಂಬುವರನ್ನು ಎರಡು ವಾರದ ಹಿಂದೆ ನಿಗೂಢ ಹತ್ಯೆಗೈದಿದ್ದ ಪ್ರಕರಣ ಭೇದಿಸಿದ ಪೊಲೀಸರು, ಆರ್ಕಟಗಲ್ಲಿ ಅಂಬರೇಷ್ ಕೇಶವರಾವ, ರಜಪುತ್ ಗಲ್ಲಿಯ ಠಾಕೂರ್ ಸಚಿನ್ ಸಿಂಗ್ ಹಾಗೂ ಕುಂಬಾರವಾಡದ ವಿನೋದ ವೈಜಿನಾಥ ಅವರನ್ನು ಮಂಗಳವಾರ ಬಂಧಿಸಿದ್ದಾರೆ.
ಕಳೆದ 13ರಂದು ನಾರಾಯಣರಾವ ಮನೆಯಿಂದ ಹೋದವರು ವಾಪಸ್ ಬರಲಿಲ್ಲ. ಅವರ ಪತ್ನಿ ನ್ಯೂಟೌನ್ ಠಾಣೆಗೆ ದೂರು ಸಲ್ಲಿಸಿದರು. ಫೆ.15ರಂದು ನಾವದಗೇರಿ ಹತ್ತಿರದ ಶುಕ್ಲತೀರ್ಥ ಹತ್ತಿರ ನಾರಾಯಣರಾವ ಶವ ಗೋಣಿ ಚೀಲದಲ್ಲಿ ಚರಂಡಿಯೊಳಗೆ ಸಿಕ್ಕಿತ್ತು. ಪ್ರಕರಣ ಸಂಬಂಧ ಎಸ್ಪಿ ನಾಗೇಶ, ಹೆಚ್ಚುವರಿ ಎಸ್ಪಿ ಡಾ.ಗೋಪಾಲ ಬ್ಯಾಕೋಡ್ ಹಾಗೂ ಡಿವೈಎಸ್ಪಿ ಬಸವೇಶ್ವರ ಹೀರಾ ಮಾರ್ಗದರ್ಶನದಲ್ಲಿ ನಗರ ವೃತ್ತ ಸಿಪಿಐ ಡಿ.ಜಿ.ರಾಜಣ್ಣ ನೇತೃತ್ವದಲ್ಲಿ ಎರಡು ತಂಡ ರಚಿಸಲಾಗಿತ್ತು. ಈ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿ ಹಂತಕರನ್ನು ಬಂಧಿಸಿ ಜೈಲಿಗೆ ಕಳಿಸಿದೆ.
ನಾರಾಯಣರಾವ ಬ್ರಿಮ್ಸ್ ನಲ್ಲಿ ಡಿ ದರ್ಜೆ ನೌಕರರಾಗಿದ್ದು, ಇತ್ತೀಚೆಗೆ ನಿವೃತ್ತಿ ಹೊಂದಿದ್ದರು. ಕೊಲೆಗೈದ ಆರೋಪಿ ಅಂಬರೇಷ್ ಸಹ ಬ್ರಿಮ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾನೆ. ನಾರಾಯಣರಾವ ನಿವೃತ್ತಿ ಹಿನ್ನೆಲೆಯಲ್ಲಿ 4 ಲಕ್ಷ ರೂ. ಬಂದಿತ್ತು. ಈ ಹಣ ದೋಚಲು ಅಂಬರೇಷ್ ಹೊಂಚು ಹಾಕಿ ಈ ಕೃತ್ಯ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಬ್ಯಾಂಕ್ ಅಕೌಂಟ್ ನಲ್ಲಿದ್ದ ಹಣವನ್ನು ಎಟಿಎಂ ಮೂಲಕ ವಂಚಿಸಲು ಅಂಬರೀಷ್ ಸೇರಿ ಮೂವರು ಕೃತ್ಯ ಎಸಗಿ ಕಂಬಿ ಹಿಂದೆ ಹೋಗಿದ್ದಾರೆ.
ನ್ಯೂಟೌನ್ ಠಾಣೆ ಪಿಎಸ್ಐ ಸಂತೋಷ ತಟ್ಟೆಪಲ್ಲಿ, ನಗರ ಠಾಣೆ ಪಿಎಸ್ಐ ಸಿದ್ಧಲಿಂಗ ನೇತೃತ್ವದ ಎರಡು ತಂಡಗಳಲ್ಲಿ ಜೈರಾಜ್, ವಿಜಯಕುಮಾರ, ಮೋಹನ, ಪ್ರಕಾಶ, ವೀರಣ್ಣ, ಅನೀಲ, ರಾಜಕುಮಾರ ದಾನಾ, ರಾಜೇಂದ್ರ, ಕಮಲಾಕರ್, ಅಕ್ರಮ್ ಇದ್ದರು.