ಮೂವರು ಕೊಲೆ ಆರೋಪಿಗಳ ಬಂಧನ

FB_IMG_1590290477859
Published on

ವಿಜಯಪುರ: ಭೀಮಾತೀರದ ರೌಡಿಶೀಟರ್ ಮಹಾದೇವ ಸಾಹುಕಾರ ಭೈರಗೊಂಡನ ಕೊಲೆ ಯತ್ನ ಹಾಗೂ ಆತನ ಅಂಗರಕ್ಷಕ ಮತ್ತು ಕಾರು ಚಾಲಕನ ಕೊಲೆ ಪ್ರಕರಣಕ್ಕೆ ಬಂಧಿಸಿದಂತೆ ಇಂದು ಮತ್ತೆ ಮೂವರನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವಿಜಯಪುರ‌ ನಿವಾಸಿಗಳಾದ ಹಸನಸಾಬಡೋಂಗ್ರಿ ಬಡಿಗೇರ, ಕಲ್ಲಪ್ಪ ಭಜಂತ್ರಿ ಮತ್ತು ಈರಣ್ಣ ಭಜಂತ್ರಿ ಎಂದು ಗುರುತಿಸಲಾಗಿದೆ. ಮೂವರು ವಿಜಯಪುರ ನಗರದ ಇಂಡಿ ರಸ್ತೆಯ ಬಂಬಳ ಅಗಸಿ ನಿವಾಸಿಗಳೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಮೂರು ಮೊಬೈಲ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನವೆಂಬರ್ 2ರಂದು ವಿಜಯಪುರ ತಾಲೂಕಿನ ಕನ್ನಾಳ‌ ಕ್ರಾಸ್ ಬಳಿ ಮಹಾದೇವ ಸಾಹುಕಾರ ಭೈರಗೊಂಡ ಹಾಗೂ ಆತನ ಬೆಂಬಲಿಗರ ಕಾರನ್ನು ಅಡ್ಡಗಟ್ಟಿ ಗುಂಡಿನ ದಾಳಿ ನಡೆಸಿದ್ದರು. ಇದರಲ್ಲಿ ಮಹಾದೇವ ಸಾಹುಕಾರ ಭೈರಗೊಂಡ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದ ಇಬ್ಬರು ಬೆಂಬಲಿಗರು ಗುಂಡು ತಗುಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 11ಜನರನ್ನು ಬಂಧಿಸಲಾಗಿದೆ. ಈ ಮೂವರು ಸೇರಿ ಬಂಧಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವಿಜಯಪುರ ಎಸ್ ಪಿ ಅನುಪಮ‌ ಅಗರವಾಲ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net