ಮೂವರು ಅಂತರ ಜಿಲ್ಲಾ ಕಳ್ಳರ ಬಂಧನ

Published on

ತಿಪಟೂರು: ಅಂತರ ಜಿಲ್ಲಾ ದರೋಡೆಕೋರರನ್ನು ಬಂಧಿಸಿರುವ ನಗರಠಾಣೆ ಪೊಲೀಸರು, ಚಿನ್ನಾಭರಣ, ಕಾರು ಮತ್ತು ಬೈಕ್​ ಸೇರಿ ಸುಮಾರು 5.40 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಜನವರಿ 28ರಂದು ಬೈಕಿನಲ್ಲಿ ಬಂದ ಇಬ್ಬರು ನಗರದ ಅನಸೂಯರಾಜ್​ ಎಂಬ ಮಹಿಳೆಯ ಕೊರಳಲ್ಲಿದ್ದ ಸುಮಾರು 80 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಪ್ರಕರಣದ ಆರೋಪಿಗಳನ್ನು ಫೆ.7ರಂದು ಕಡೂರಿನಲ್ಲಿ ತಿಪಟೂರು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರಿನ ಇರ್ಫಾನ್​ (35), ಅಸ್ಫಾನ್​ (23) ಮತ್ತು ಬೇಲೂರು ತಾಲೂಕಿನ ಮುದಿಗೆರೆಯ ಅಖಿಬ್​ ಶರೀಫ್​ (24) ಬಂಧಿತರು. ತಿಪಟೂರಿನಲ್ಲಿ ಕದ್ದ ಬೈಕ್​ನೊಂದಿಗೆ ಜ.28ರಂದು ಚಿನ್ನ ಸರ ಕದ್ದ ಆರೋಪಿಗಳು, ನಂತರ ಕಡೂರು ರೈಲ್ವೆ ನಿಲ್ದಾಣದ ಬಳಿ ಕಾರನ್ನು ಕದ್ದು, ಹಿರಿಯೂರಿನ ಜುವೆಲ್ಲರಿ ಒಂದರಲ್ಲಿ ಚಿನ್ನಾಭರಣ ದರೋಡೆ ಮಾಡಲು ಸಂಚು ರೂಪಿಸಿದ್ದರು. ಅದಕ್ಕೆ ಅಗತ್ಯವಿದ್ದ ಒಂದು ಗ್ಯಾಸ್​ ಸಿಲೆಂಡರ್​, ಗ್ಯಾಸ್​ ಕಟ್ಟರ್​, ಹರಿತವಾದ ಕಬ್ಬಿಣದ ಹಾರೆಯೊಂದಿಗೆ ಸಜ್ಜಾಗಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಜಿಲ್ಲಾ ಎಎಸ್ಪಿ ಮರಿಯಪ್ಪ ಹಾಗೂ ಬಿ.ಎಸ್​.ಅಬ್ದುಲ್​ ಖಾದರ್​ ನೇತೃತ್ವದಲ್ಲಿ ತಿಪಟೂರು ಡಿವೈಎಸ್ಪಿ ವಿನಾಯಕ್​ ಎನ್​.ಶಟಗೇರಿ ಸೂಚನೆ ಮೇರೆಗೆ ನಗರಠಾಣೆಯ ಇನ್​ಸ್ಪೆಕ್ಟರ್​ ಸಿ.ವೆಂಕಟೇಶ್​, ಪಿಎಸ್​ಐ ಡಿ.ಕೃಷ್ಣಪ್ಪ, ಎಎಸ್​ಐಗಳಾದ ಚಿಕ್ಕಲಕ್ಕೇಗೌಡ, ಉಸ್ಮಾನ್​ಸಾಬ್​ ಮತ್ತು ಸಿಬ್ಬಂದಿ ಮೋಹನ್​ಕುಮಾರ್​, ಮೋಹನ್​, ಲೋಕೇಶ್​, ಯತೀಶ್​, ಸಾಗರ್​, ಅಂಬಿಗೇರ್​, ಮಂಜುನಾಥ್​ ಕುಪ್ಪಾಡ, ಮನೋಜ್​ ಕಾರ್ಯಾಚರಣೆಯಲ್ಲಿ ಇದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣ

ದಾಖಲಾದ 10 ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿದ ಸಿಬ್ಬಂದಿಯನ್ನು ಎಸ್ಪಿ ಕೆ.ವಿ. ಅಶೋಕ್​ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net