ಮೂವರಿಗೆ ಗೌರವ ಡಾಕ್ಟರೇಟ್ ಪುರಸ್ಕ್ರತ

05 YERRISWAMY 04
Published on

ಬಳ್ಳಾರಿ : ಇಲ್ಲಿನ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯದಲ್ಲಿ ಸೆ. 06 ರಂದು ನಡೆಯುವ 12ನೇ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮೂವರಿಗೆ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ. ಎಂ. ಮುನಿರಾಜು ಹೇಳಿದರು.
ನಗರದ ವಿಎಸ್‌ಕೆ ವಿವಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಂಗಭೂಮಿ, ಕಲೆ ಮತ್ತು ಸಮಾಜ ಸೇವೆ ವಿಭಾಗದಲ್ಲಿ ನಟಿ ಉಮಾಶ್ರೀ, ಕೈಗಾರಿಕೆ ಹಾಗೂ ಸಮಾಜ ಸೇವೆ ವಿಭಾಗದಲ್ಲಿ ಎಸ್.ಕೆ. ಮೋದಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು. ರಾಜ್ಯದ ವಿವಿಧಡೆಯಿಂದ ಎಂಟು ಜನರು ಡಾಕ್ಟರೇಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ವಿವಿಯ ಸಿಂಡಿಕೇಟ್ ಸಭೆಯಲ್ಲಿ ಐವರನ್ನು ಆಯ್ಕೆ ಮಾಡಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಅಲ್ಲಿ ಆಯ್ಕೆ ಸಮಿತಿ ರಚಿಸಿ, ಮೂವರನ್ನು ಆಯ್ಕೆ ಮಾಡಲಾಗಿದೆ. ಈ ಬಾರಿ ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 42 ವಿದ್ಯಾರ್ಥಿಗಳು 53 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳಲಿದ್ದಾರೆ. ಅಲ್ಲದೆ, 36 ಸಂಶೋಧನಾರ್ಥಿಗಳು ಡಾಕ್ಟರೇಟ್ ಪದವಿ ಪಡೆಯಲಿದ್ದಾರೆ. ಎಲ್ಲ ವಿಭಾಗಗಳ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯಿಂದ 125 ವಿದ್ಯಾರ್ಥಿಗಳು ರ‌್ಯಾಂಕ್ ಪ್ರಮಾಣ ಪತ್ರಗಳನ್ನು ಪಡೆಯಲಿದ್ದಾರೆ ಎಂದರು. ವಿಶ್ವ ವಿದ್ಯಾಲಯದಲ್ಲಿ ಒಟ್ಟು 13,339 ಸ್ನಾತಕ ಪದವಿ ಅಂತಿಮ ಪರೀಕ್ಷೆ ಹಾಗೂ 1,733 ಸ್ನಾತಕೋತ್ತರ ಪದವಿಯಲ್ಲಿ ಹಾಜರಾಗಿ ಉತ್ತೀರ್ಣರಾಗಿದ್ದಾರೆ ಎಂದರು.
03 ಚಿನ್ನದ ಪದಕ : ಔದ್ಯೋಗಿಕ ರಸಾಯನ ಶಾಸ್ತ್ರದ ಪಿ. ಉಮಾ, ಖನಿಜ ಸಂಸ್ಕರಣದ ಕೆ.ಬಿ. ನಾಗರಾಜ ಹಾಗೂ ವಾಣಿಜ್ಯ ಶಾಸ್ತ್ರದ ದೌಲತ್ ಬಾನು ಮೂರು ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ. ಕನ್ನಡ ವಿಭಾಗದ ಎ.ಕೆ. ಹುಲಿಗೆಮ್ಮ, ರಸಾಯನಶಾಸ್ತ್ರದ ಎ. ಪ್ರಿಯಾಂಕ, ಭೌತಶಾಸ್ತ್ರದ ಪೂಜಾ ಹಿರೇಹಾಳ್, ಸಮಾಜಶಾಸ್ತ್ರದ ಸಾಲುಂಕೆ ಮಿತ್ರಾ ಹಾಗೂ ಬಿಎಸ್‌ಸಿಯ ಬಿ.ಪಿ. ಶ್ರೇಯಾ ತಲಾ ಎರಡು ಚಿನ್ನದ ಪದಕಗಳನ್ನು ಮುಡಿಗೆರಿಸಿಕೊಳ್ಳಲಿದ್ದಾರೆ ಎಂದರು. ಇದೆ ವೇಳೆ ಕುಲಸಚಿವರಾದ ಎಸ್.ಎನ್. ರುದ್ರೇಶ್, ರಮೇಶ ಓಲೇಕಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net