ಮೂಳೆಗಳ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ

26blrp2
Published on

ಬೇಲೂರು: ಮನುಷ್ಯನ ದೇಹದ ಆರೋಗ್ಯದ ವಿಷದಲ್ಲಿ ಮೂಳೆಗಳು ಪ್ರಮುಖ ಪಾತ್ರ ವಹಿಸುತ್ತವೆ, ಆದ್ದರಿಂದ ಮೂಳೆಗಳ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯವಾಗಿದೆ ಎಂದು ಹಾಸನದ ಕರ್ಣ ಆಸ್ಪತ್ರೆಯ ಮೂಳೆ ತಜ್ಞ ಡಾ.ಗುರುಪ್ರಸಾದ್ ತಿಳಿಸಿದರು.


ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಸುರಭಿ ಫೌಂಡೇಷನ್, ಕರ್ಣ ಆಸ್ಪತ್ರೆ ಹಾಸನ ಹಾಗೂ ಲಯನ್ಸ್ ಕ್ಲಬ್ ಬೇಲೂರು ಘಟಕದ ವತಿಯಿಂದ ಭಾನುವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಕ್ಯಾಲ್ಸಿಯಂ ನಮ್ಮ ಮೂಳೆಗಳ ಆರೋಗ್ಯಕ್ಕೆ ಮತ್ತು ಆಸ್ಟಿಯೋಪೋರಸ್ ನಿವಾರಣೆಗೆ ಬಹಳ ಉತ್ತಮವಾಗಿದೆ. ಕ್ಯಾಲ್ಸಿಯಂ ಮೂಳೆಗಳ ರಚನೆಗೆ ಬಹಳ ಆವಶ್ಯವಿರುವ ಪೋಷಕಾಂಶ. ನಮ್ಮ ಜೀವನ ಪರ್ಯಂತ ಮೂಳೆಗಳ ಆರೋಗ್ಯ ಮತ್ತು ದೃಢತೆಯನ್ನು ಕಾಪಾಡಿಕೊಳ್ಳಲು ಕ್ಯಾಲ್ಸಿಯಂ ಸಹಾಯ ಮಾಡುತ್ತದೆ. ಆದರೆ ಶರೀರಕ್ಕೆ ಸಾಕಷ್ಟು ಪ್ರಮಾಣದಲ್ಲಿ ವಿಟಾಮಿನ್ ಡಿ ಪೂರೈಕೆ ಆದರೆ ಮಾತ್ರವೇ ಕ್ಯಾಲ್ಸಿಯಂ ಸದುಪಯೋಗವಾಗಿ ಮೂಳೆಗಳ ಸಂರಚನೆಯನ್ನು ತಲುಪಲು ಸಾಧ್ಯವಾಗುತ್ತದೆ ಎಂದರು.


ಲಯನ್ಸ್ ಸಂಸ್ಥೆಯ ಡಾ.ಚಂದ್ರಮೌಳಿ ಮಾತನಾಡಿ, ಲಯನ್ಸ್ ಸದಸ್ಯರು ತಾವು ದುಡಿದ ಒಂದು ಭಾಗವನ್ನು ಸಮಾಜಕ್ಕೆ ಅರ್ಪಣೆ ಮಾಡುತ್ತಿದ್ದಾರೆ. ಬೇಲೂರು ಲಯನ್ಸ್ ಕಳೆದ 13 ವರ್ಷದಿಂದ ಸೇವೆ ಸಲ್ಲಿಸಿ ತಾಲೂಕಿನ ಜನ ಮನ್ನಣೆ ಪಡೆದಿದೆ ಎಂದರು.


ಹಾಸನ ಕರ್ಣ ಆಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಅರ್ಜುನ, ಮೂಳೆ ತಜ್ಞ ಡಾ.ಗುರು ಪ್ರಸಾದ್, ಹೆಬ್ಬಾಳು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನುಪಮಾ, ಡಾ. ಅಬಿಬುಲ್ಲಾ ರೋಗಿಗಳಿಗೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು, ಸುಮಾರು 200 ರೋಗಿಗಳು ಶಿಬಿರದಲ್ಲಿ ಪಾಲ್ಗೊಂಡು ಚಿಕಿತ್ಸೆ ಪಡೆದರು.


ಹೆಬ್ಬಾಳು ಗ್ರಾಪಂ ಸದಸ್ಯರಾದ ಗಿರೀಶ್, ಪ್ರತಿಭಾ, ರತಿದೇವಿ, ಲಯನ್ಸ್ ಮಾಜಿ ಅಧ್ಯಕ್ಷ ಎಂ.ಪಿ.ಪೂವಯ್ಯ, ರಮೇಶ್ ಕುಮಾರ್, ಕೆ.ಎಲ್.ಸುರೇಶ್, ಪದಾಧಿಕಾರಿಗಳಾದ ಮುಕ್ತಿಯಾರ್ ಅಹಮದ್, ಹೆಬ್ಬಾಳು ಹಾಲಪ್ಪ, ಪುಟ್ಟಸ್ವಾಮಿ, ಸಂತೋಷ್, ಪ್ರಶಾಂತ್, ಅದರ್ಶ, ಹೆಬ್ಬಾಳು ಆರೋಗ್ಯ ಸುರಕ್ಷತಾ ಅಧಿಕಾರಿ ಚಂದನ್, ಮೇಘನಾ, ಕೇಬಲ್ ವಿಜಯಕುಮಾರ್, ಡಾ.ಜೀವನ್, ಗ್ರಂಥಪಾಲಕ ಮಂಜೇಗೌಡ, ನಾಟಿ ವೈದ್ಯ ಉಮೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net