ಮೂಲಸೌಲಭ್ಯ ಕಲ್ಪಿಸಲು ಒತ್ತಾಯ

hnl manavi aug 6
Published on

ಹೊನ್ನಾಳಿ: ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ಟಿ.ಬಿ.ವೃತ್ತದ ಮೂಲ ನಿವಾಸಿಗಳು ಶಾಸಕ ಡಿ.ಜಿ.ಶಾಂತನಗೌಡ ಅವರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು.
ವರ್ಷದ ಹಿಂದೆ ನಮ್ಮ ಟಿ.ಬಿ.ವೃತ್ತ ಎಚ್.ಕಡದಕಟ್ಟೆ ಗ್ರಾ.ಪಂ.ವ್ಯಾಪ್ತಿಗೆ ಒಳಪಟ್ಟಿತ್ತು, ಆದರೆ ಟಿ.ಬಿ.ವೃತ್ತ ಹಾಗೂ ಹಿರೇಮಠ ಪರಸಭೆ ವ್ಯಾಪ್ತಿಗೆ ಸೇರಿಸಿ ಹಿಂದಿನ ಸರ್ಕಾರ ಆದೇಶ ಹೊರಡಿಸಿದ್ದರಿಂದ ನಾವುಗಳು ಪರಸಭೆಯ ವ್ಯಾಪ್ತಿಗೆ ಬಂದರೂ ನಮಗೆ ಮೂಲ ಸೌಕರ್ಯ ಒದಗಿಸಿಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ಅಲ್ಲಿನ ನಿವಾಸಿಗಳು ದೂರಿದರು.
ಸಮಸ್ಯೆಗಳ ಬಗ್ಗೆ ಪರುಸಭೆ ಅಧಿಕಾರಿಗಳನ್ನು ಸಂಪರ್ಕಿಸಿ ನಮ್ಮ ಸಮಸ್ಯೆಗಳ ಬಗ್ಗೆ ಹೇಳಿಕೊಂಡರೆ ಈಗತಾನೆ ನಮ್ಮ ವ್ಯಾಪ್ತಿಗೆ ಸೇರಿದೆ, ಮುಂದಿನ ದಿನಗಳಲ್ಲಿ ಅನುದಾನ ಹಾಕಿ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿ ನಮ್ಮನ್ನು ಸಾಗಿ ಹಾಕುತ್ತಾರೆ, ಆದರೆ ನಂತರ ಇತ್ತಕಡೆ ತಲೆಹಾಕಿ ಕೂಡ ಮಲಗುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆರೋಪಿಸಿದರು.
ಶಿವಮೊಗ್ಗಕ್ಕೆ ಹೋಗುವ ರಸ್ತೆಯ ಎಡ ಭಾಗದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಗಾಲದಲ್ಲಿ ಚರಂಡಿ ನೀರೆಲ್ಲ ರಸ್ತೆಗೆ ಬರುತ್ತದೆ, ಅದರಲ್ಲೇ ನಾವು ಓಡಾಡಬೇಕಾದ ದುಸ್ಥಿತಿ ಇದೆ.
ಕಳೆದ 30 ವರ್ಷಗಳಿಂದ ಇಲ್ಲಿನ ರಸ್ತೆಗಳು ಕಂಕ್ರಿಟ್ ಕಂಡಿಲ್ಲ, ಚರಂಡಿ ವ್ಯವಸ್ಥೆ ಆಗಿಲ್ಲ, ಒಟ್ಟಾರೆ ಇಲ್ಲಿ ಅಭಿವೃದ್ಧಿ ಎಂಬುದೇ ಮರೀಚಿಕೆಯಾಗಿದೆ ಎಂದು ತಮ್ಮ ಸಮಸ್ಯೆಗಳನ್ನು ಶಾಸಕರ ಬಳಿ ಎಳೆಎಳೆಯಾಗಿ ಬಿಡಿಸಿ ಹೇಳಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಡಿ.ಜಿ.ಶಾಂತನಗೌಡ, ನಿಮ್ಮ ಸಮಸ್ಯೆ ನನ್ನ ಗಮನಕ್ಕೂ ಬಂದಿದೆ. ಶೀಘ್ರವೇ ನಾನೇ ಅಧಿಕಾರಿಗಳನ್ನು ಕರೆದುಕೊಂಡು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಅಭಿವೃದ್ಧಿ ಬಗ್ಗೆ ಪಟ್ಟಿ ಮಾಡಿಕೊಂಡು ಪುರಸಭೆ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಕ ಸಿದ್ದೇಶ್, ಸೋಮಶೇಖರ್, ಶರತ್, ಎಂ.ಬಸವರಾಜಪ್ಪ, ಅಬ್ದಲ್‌ವಾಜೀದ್, ದ್ಯಾಮಣ್ಣ, ಮಹಾಂತೇಶ್, ರಾಘವೇಂದ್ರಚಾರ್, ಕರವೇ ವಿನಯ್‌ಕುಮಾರ್, ಪುಟ್ಟಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net