

ಚಿತ್ರದುರ್ಗ: ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 77 ವರ್ಷವಾದರೂ ಮೂಲಸೌಕರ್ಯಗಳಿಂದ ವಂಚಿತರಾದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜನ ಮುಗ್ದರು, ಅಮಾಯಕರು ಎಂದು ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಬೇಸರಿಸಿದರು.
ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಚಾಯ್ ಪೇ ಚರ್ಚೆ ವೇಳೆ ಮಾತನಾಡಿದ ಅವರು, ಕುಡಿಯುವ ನೀರಿಗೂ ಈ ಭಾಗದ ಜನತೆ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಜನರ ಹಿತಕ್ಕಾಗಿ ಶ್ರಮಿಸಲು ಸದಾ ಬದ್ಧನಾಗಿದ್ದೇನೆ ಎಂದರು.
ನನಗೆ ಸಿಕ್ಕಿದ್ದು, ಕಡಿಮೆ ಅವಧಿ. ಹೀಗಾಗಿ ಚಿತ್ರದುರ್ಗ ಜಿಲ್ಲೆಯ ಆರು, ತುಮಕೂರು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ 3 ಸಾವಿರ ಹಳ್ಳಿಗಳಲ್ಲಿ ಸುತ್ತಾಡಿದ್ದೇನೆ. ಜನರ ಸಮಸ್ಯೆ ಅರಿತಿದ್ದೇನೆ. ಫಲಿತಾಂಶ ಸಕಾರಾತ್ಮವಾಗಿ ಬಂದರೆ, ಸಂಸತ್‌ನಲ್ಲಿ ಕ್ಷೇತ್ರದ ಜನರ ಪರವಾಗಿ ಧ್ವನಿಯಾಗಿ ನಿಂತು ಮೂಲಸೌಕರ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ದೇಶದೊಳಗೆ ಈಚೆಗೆ ನಡೆಯುತ್ತಿರುವ ಘಟನೆಗಳನ್ನು ಅವಲೋಕಿಸಿದರೆ, ರಾಷ್ಟ್ರ ಮತ್ತು ಪ್ರಜೆಗಳ ಸುಭದ್ರತೆಗಾಗಿ ಯಾರ ಕೈಗೆ ಅಧಿಕಾರ ಕೊಡಬೇಕು. ಯಾರು ಪ್ರಧಾನಿಯಾದರೆ, ಒಳಿತೆಂಬ ಜಾಗೃತಿ ಮತದಾರರಲ್ಲಿ ಮೂಡಿರುವುದು ಅತ್ಯಂತ
ಸಂತಸದ ಸಂಗತಿ ಎಂದರು.
ಚುನಾವಣೆ ವೇಳೆ ಪಕ್ಷದ ಅಭ್ಯರ್ಥಿಯಾಗಿ ರಾಜಕೀಯ ಮಾಡುವುದು ಸಹಜ. ಮತದಾನ ಮುಗಿದ ನಂತರ ಕ್ಷೇತ್ರದ ಎಲ್ಲ ಮತದಾರರು ನಮ್ಮವರೇ. ಯಾವ ತಾರತಮ್ಯವಿಲ್ಲದೆ, ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದರು.
ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ವಕ್ತಾರ ನಾಗರಾಜ್ ಬೇದ್ರೆ ಇತರರಿದ್ದರು.