

ತುಮಕೂರು: ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಲೆಮಾರಿ ಸಮುದಾಯಗಳಿಗೆ ಕುಡಿಯುವ ನೀರು, ವಿದ್ಯುತ್, ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲು ಆದ್ಯತೆ ನೀಡಬೇಕು ಎಂದು ಡಿಸಿ ಶುಭಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಲೆಮಾರಿ ಸಮುದಾಯಗಳ ಜಿಲ್ಲಾ ಮಟ್ಟದ ಕುಂದು&ಕೊರತೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಜಿಲ್ಲೆಯ ಅನೇಕ ಅಲೆಮಾರಿ ಸಮುದಾಯದವರು ಆಧಾರ್ ಕಾರ್ಡ್, ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲೆಗಳಿಲ್ಲದೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಅಲೆಮಾರಿ ಸಮುದಾಯಗಳು ವಾಸಿಸುತ್ತಿರುವ ಗ್ರಾಮಗಳಿಗೆ ತೆರಳಿ ಜನರಲ್ಲಿ ಅರಿವು ಮೂಡಿಸಿ ಅಗತ್ಯ ದಾಖಲೆ ಪಡೆಯುವಂತೆ ಮಾಡಬೇಕು. ಪ್ರತಿ 3 ತಿಂಗಳಿಗೊಮ್ಮೆತಾಲೂಕು ಮಟ್ಟದಲ್ಲಿ ಪ.ಜಾತಿ, ಪ.ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಲೆಮಾರಿ ಸಮುದಾಯಗಳ ಕುಂದು&ಕೊರತೆ ಸಭೆನಡೆಸಬೇಕು ಎಂದರು. ಅಲೆಮಾರಿ ಸಮುದಾಯದವರಿಗೆ ವಿಶೇಷ ವಸತಿ ಯೋಜನೆಯಡಿ ನಿವೇಶನ ಸೌಲಭ್ಯಕ್ಕಾಗಿ 3.50 ಲಕ್ಷ ರೂ. ಸಹಾಯಧನ ನಿಗದಿಪಡಿಸಲಾಗಿದ್ದರೂ ಸಹ ರಾಜೀವ್ ಗಾಂಧಿ ವಸತಿ ನಿಗಮಕೇವಲ 2 ಲಕ್ಷ ರೂ. ಮಾತ್ರ ನೀಡುತ್ತಿದ್ದು, ಮನೆ ನಿರ್ಮಿಸಿಕೊಳ್ಳಲು ಹೆಚ್ಚಿನ ಅನುದಾನ ನೀಡಬೇಕು ಎಂದು ನಿರ್ದೇಶಿಸಿದರು.ಜಿಲ್ಲೆಯಲ್ಲಿ ಅಲೆಮಾರಿ ಸಮುದಾಯಗಳಿಗೆ ನಿವೇಶನ ನೀಡಿರುವ ಪ್ರದೇಶಗಳಲ್ಲಿ ಕಲ್ಲು ಬಂಡೆಗಳಿದ್ದು, ಜನರು ವಾಸಿಸಲು ಯೋಗ್ಯವಾಗಿಲ್ಲ. ಉತ್ತಮ ನಿವೇಶನವನ್ನು ನೀಡಬೇಕು ಎಂದು ಸಮುದಾಯದ ಮುಖಂಡರು ಸಭೆಗೆ ಬೇಡಿಕೆಯಿಟ್ಟರು.
ಜಿಪಂ ಸಿಇಒ ಜಿ.ಪ್ರಭು ಮಾತನಾಡಿ, ಜಿಲ್ಲೆಯ ಅಲೆಮಾರಿ ಸಮುದಾಯಗಳು ವಾಸಿಸುತ್ತಿರುವ ಪ್ರದೇಶಗಳು ಮಜಿರೆ ಗ್ರಾಮಗಳಾಗಿದ್ದು, ಸರ್ಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲು ನಿವೇಶನಗಳ ಸಮಸ್ಯೆ ಉಂಟಾಗುತ್ತಿದೆ. ಮಜಿರೆ ಗ್ರಾಮಗಳನ್ನು ಶೀಘ್ರವಾಗಿ ಕಂದಾಯ ಗ್ರಾಮಗಳನ್ನಾಗಿಸಿ ನಿವೇಶನ ಹಂಚಿಕೆ ಮಾಡಲಾಗುತ್ತದೆ. ಗ್ರಾಮ ಪಂಚಾಯಿತಿಯಿಂದ ಒದಗಿಸುವ ಸೌಲಭ್ಯಗಳಲ್ಲಿ ಅಲೆಮಾರಿ ಸಮುದಾಯಗಳ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದರು.
ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಮಾತನಾಡಿ, ಜಿಲ್ಲೆಯಲ್ಲಿ ಮೊದಲ ಬಾರಿಗೆ ಅಲೆಮಾರಿ ಸಮುದಾಯಗಳ ಸಮಸ್ಯೆಗಳನ್ನು ಅಳಿಸಲು ಜಿಲ್ಲಾ ಮಟ್ಟದಲ್ಲಿ ಕುಂದು&ಕೊರತೆ ಸಭೆ ನಡೆಸುತ್ತಿರುವುದು ಅಲೆಮಾರಿ ಸಮುದಾಯಗಳ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಿದೆ ಎಂದರು. ಅಧಿಕಾರಿಗಳು ಮತ್ತು ಅಲೆಮಾರಿ ಸಮುದಾಯಗಳು ಸಮನ್ವತೆ ಕಾಯ್ದುಕೊಂಡಾಗ ಅಲೆಮಾರಿ ಸಮುದಾಯಗಳು ಅಭಿವೃದ್ಧಿ ಹೊಂದಲು ಸಾಧ್ಯ. ಕುಂದು&ಕೊರತೆ ಸಭೆಗಳಲ್ಲಿ ವೈಯಕ್ತಿಕ ಸಮಸ್ಯೆಗಳಿಗಿಂತ ಸಮುದಾಯ ಕೇಂದ್ರಿತ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಸಮುದಾಯದ ಮುಖಂಡರಿಗೆ ಮನವರಿಕೆ ಮಾಡಿದರು. ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ಸಪ್ತಶ್ರೀ, ಗೋಟೂರು ಶಿವಪ್ಪ ಇದ್ದರು.