

ಶಹಾಬಾದ್: ನಗರದ ಆಶ್ರಯ ಕಾಲನಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಜತೆಗೆ ವಿವಿಧ ಬಡಾವಣೆಗಳಲ್ಲಿ ಕನಿಷ್ಠ ಮೂಲಸೌಕರ್ಯಗಳಾದ ನೀರು, ಬೀದಿ ದೀಪ, ಚರಂಡಿ, ಮಹಿಳಾ ಶೌಚಗೃಹ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎಸ್‌ಯುಸಿಐಸಿ ಪಕ್ಷದಿಂದ ನಗರಸಭೆ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.
ನೇತೃತ್ವ ವಹಿಸಿದ್ದ ರಾಘವೇಂದ್ರ ಎಂ.ಜಿ. ಮಾತನಾಡಿ, ನಗರದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಇಲ್ಲ. ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ರಸ್ತೆಗೆ ಹರಿಯುತ್ತಿದೆ. ಬಡಾವಣೆಗಳಲ್ಲಿ ಮುಳ್ಳು-ಕಂಟಿ ಬೆಳೆದು ವಿಷಜಂತುಗಳ ತಾಣವಾಗಿದೆ. 20-25 ವರ್ಷದಿಂದ ಮರಗೋಳ ಕಾಲೇಜು, ರಮಣಾದೇವಿ ಮಂದಿರ, ರಾಮಗಡನ ಆಶ್ರಯ ಕಾಲನಿ ನಿವಾಸಿಗಳಿಗೆ ಹಕ್ಕುಪತ್ರ ನೀಡಿ ಕನಿಷ್ಠ ಸೌಲಭ್ಯ ಕಲ್ಪಸುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ಜಿಲ್ಲಾ ಮುಖಂಡ ಜಗನ್ನಾಥ ಎಸ್.ಎಚ್. ಮಾತನಾಡಿ ನಗರದಲ್ಲಿ ನಾಯಿ-ಹಂದಿಗಳ ಕಾಟ ಹೆಚ್ಚಾಗಿದೆ. ಇತ್ತೀಚೆಗೆ ನಾಯಿ ಕಚ್ಚಿ ಗಾಯಗೊಂಡ ಮಕ್ಕಳ ಚಿಕಿತ್ಸೆ ಜತೆಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಗುಂಡಮ್ಮಾ ಮಡಿವಾಳ ಮಾತನಾಡಿ, ನಗರಸಭೆ ಅಧ್ಯಕ್ಷರ ವಾರ್ಡ್ನಲ್ಲೇ ಮಹಿಳಾ ಶೌಚಗೃಹ, ಬೀದಿ ದೀಪ ಇಲ್ಲ. ಮಹಿಳೆಯರು ಇಂದಿಗೂ ಮುಳ್ಳು-ಕಂಟಿಗಳ ಮಧ್ಯೆಯೇ ಬಹಿರ್ದೆಸೆಗೆ ಹೋಗುತ್ತಿರುವುದು ಕಳವಳಕಾರಿ. ತಕ್ಷಣ ಸ್ತಿçÃಯರಿಗೆ ಪ್ರತ್ಯೇಕ ಶೌಚಗೃಹ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಎಸ್‌ಯುಸಿಐಸಿ ಪಕ್ಷದ ಉಪಾಧ್ಯಕ್ಷೆ ಫಾತಿಮಾ, ಗಣಪತರಾವ ಮಾನೆ, ರಾಜೇಂದ್ರ ಆತನೂರ, ರಾಜು ಮೇಸ್ತಿç, ಸೂರ್ಯಕಾಂತ ಕೋಬಾಳ, ರಘು ಪವಾರ್, ರಮೇಶ ದೇವಕರ್, ಅಂಬಿಕಾ ಗುಜರಾಲಕರ್, ರಾಧಿಕಾ ಚೌಧರಿ, ದೇವರಾಜ ಹೊನಗುಂಟಾ ಇತರರು ಪಾಲ್ಗೊಂಡಿದ್ದರು. ವಿವಿಧ ಬೇಡಿಕೆಗಳ ಮನವಿಪತ್ರವನ್ನು ಪೌರಾಯುಕ್ತ ಡಾ.ಕೆ. ಗುರುಲಿಂಗಪ್ಪ ಅವರಿಗೆ ಸಲ್ಲಿಸಲಾಯಿತು. ಇದಕ್ಕೂ ಮುನ್ನ ಬಸವೇಶ್ವರ ವೃತ್ತದಿಂದ ನಗರಸಭೆ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಕೊಳವೆಬಾವಿಗೆ ಕಲ್ಲು ಶೌಚಗೃಹಕ್ಕಿಲ್ಲ ಸ್ಥಳ: ನಗರದ ಬಸವೇಶ್ವರ ಬಡಾವಣೆಯಲ್ಲಿ ಹಿಂದೆ ಕೊರೆದಿದ್ದ ಕೊಳವೆಬಾವಿಯಲ್ಲಿ ಯಾರೋ ಕಲ್ಲು ಹಾಕಿದ್ದರಿಂದ ಬಳಕೆಗೆ ಬಾರದಂತಾಗಿದೆ. ಹೊಸ ಕೊಳವೆ ಬಾವಿ ಕೊರೆಸಬೇಕಾಗಿದೆ. ಮಂಜೂರಾದ ಶೌಚಗೃಹಕ್ಕೆ ಜನರಿಂದ ವಿರೋಧ ವ್ಯಕ್ತವಾಗುತ್ತಿದ್ದು, ಸೂಕ್ತ ಸ್ಥಳ ಸಿಗುತ್ತಿಲ್ಲ ಎಂದು ನಗರಸಭೆ ಸದಸ್ಯ ಸೂರ್ಯಕಾಂತ ಕೋಬಾಳ ಪ್ರತಿಭಟನಾಕಾರರ ಮುಂದೆ ಸಮಸ್ಯೆಯನ್ನು ಬಿಚ್ಚಿಟ್ಟರು.