

ಬಸವಕಲ್ಯಾಣ: ಜನಪ್ರತಿನಿಧಿಗಳು, ಪ್ರಮುಖರು ಹಾಗೂ ಸಾರ್ವಜನಿಕರ ಸಲಹೆ ಮತ್ತು ಅಭಿಪ್ರಾಯ ಪರಿಗಣಿಸಿ ನಗರಸಭೆ ೨೦೨೫-೨೬ರ ಬಜೆಟ್ ಸಿದ್ಧಪಡಿಸುವುದಾಗಿ ಪೌರಾಯುಕ್ತ ರಾಜು ಡಿ.ಬಣಕಾರ ಹೇಳಿದರು.
ನಾರಾಯಣಪುರ ಕ್ರಾಸ್ ಹತ್ತಿರದ ನಗರಸಭೆ ಹೊಸ ಕಟ್ಟಡದ ಸಭಾ ಭವನದಲ್ಲಿ ಶುಕ್ರವಾರ ಕರೆದಿದ್ದ ಸಮಾಲೋಚನಾ ಸಭೆಯಲ್ಲಿ ಕೈಗೆತ್ತಿಕೊಳ್ಳಬೇಕಾದ ಕಾಮಗಾರಿ, ನಗರ ಸುಂದರೀಕರಣ ಕುರಿತು ಜನಪ್ರತಿನಿಧಿಗಳು, ಪ್ರಮುಖರ ಅಭಿಪ್ರಾಯ ಕೇಳಿದ ನಂತರ ಮಾತನಾಡಿದ ಅವರು, ಅಗತ್ಯವಿರುವ ಕಾಮಗಾರಿಗಳನ್ನು ಆದ್ಯತೆ ಮೆರೆಗೆ ಕೈಗೊಂಡು ಆಯವ್ಯಯ ತಯಾರಿಸಲಾಗುವುದು ಎಂದರು.
ಸಿಪಿಐ ಅಲಿಸಾಬ್ ಮಾತನಾಡಿ, ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ, ಬ್ಯಾರಿಕೇಡ್ ಅಳವಡಿಸಿ ಆಟೋ ನಿಲ್ದಾಣ, ಅಗತ್ಯವಿರುವ ಕಡೆ ರಸ್ತೆಗೆ ವೇಗ ನಿಯಂತ್ರಣ ಹಂಪ್ಸ್ ಹಾಕಬೇಕು. ನೀಲಾಂಬಿಕಾ ಕಾಲೇಜು ಬಳಿ ವಾಹನ ನಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ನಗರಸಭೆ ಸದಸ್ಯ ರವೀಂದ್ರ ಬೋರಾಳೆ ಮಾತನಾಡಿ, ಸಿಬ್ಬಂದಿ ಕೊರತೆ ಜತೆಗೆ ವಾಹನ ಚಾಲಕರಿಲ್ಲದೇ ಸಮಸ್ಯೆ ಆಗುತ್ತಿದೆ. ಗುತ್ತಿಗೆ ಆಧಾರದಲ್ಲಿ ಚಾಲಕರ ನೇಮಕ ಮಾಡಬೇಕು. ಸರ್ಕಾರಿ ಜಮೀನು ರಕ್ಷಿಸುವುದರ ಜತೆಗೆ ಉದ್ಯಾನವನ ಸ್ಥಳ ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.
ಐಡಿಯಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮುಜಾಹಿದ್ ಪಾಶಾ ಖುರೇಶಿ ಮಾತನಾಡಿ, ನಗರದಲ್ಲಿ ನಿರಂತರ ನೀರು ಸರಬರಾಜು ಯೋಜನೆಯಡಿ ಪ್ರತಿದಿನ ನೀರು ಬರುತ್ತಿಲ್ಲ. ನಗರದ ಐದು ಕಡೆ ಓವರ್‌ಹೆಡ್ ಟ್ಯಾಂಕ್, ನಾಲ್ಕು ಕಡೆ ಬಸ್ ನಿಲ್ದಾಣ ನಿರ್ಮಿಸಬೇಕು. ಯಾವುದೇ ಕಾಮಗಾರಿ ಇರಲಿ, ಮುಗಿದ ನಂತರವೇ ಗುತ್ತಿಗೆದಾರರಿಗೆ ಎರಡನೇ ಹಂತದ ಬಿಲ್ ಪಾವತಿಸಬೇಕು ಎಂದರು.
ನಗರಸಭೆ ಶಾಪಿಂಗ್ ಕಾಂಪ್ಲೆಕ್ಸ್ನಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿ ಮಳಿಗೆ ಆರಂಭವಾಗುವಂತೆ ಕ್ರಮ ಕೈಗೊಂಡರೆ ನಗರಸಭೆಗೆ ಆದಾಯ ಬರಲಿದೆ ಎಂದು ಕಿರಣ ಆರ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಜೆಡಿಎಸ್ ನಗರ ಪ್ರಧಾನ ಕಾರ್ಯದರ್ಶಿ ಧನರಾಜ ರಾಜೋಳೆ ಮಾತನಾಡಿ, ೨೦೧೯ರಿಂದ ಇದುವರೆಗೆ ಎಸ್‌ಟಿಪಿ ಮತ್ತು ಟಿಎಸ್‌ಪಿ ಹಾಗೂ ವಿಕಲಚೇತನರ ಅನುದಾನ ಎಷ್ಟು ಬಳಕೆ ಬಳಕೆಯಾಗಿದೆ ಎಂಬ ಬಗ್ಗೆ ತನಿಖೆ ಮಾಡಬೇಕು ಎಂದು ಹೇಳಿದರು.
ನಗರದಲ್ಲಿ ರಸ್ತೆಗಳಿಗೆ ಸ್ಪೀಡ್ ಬ್ರೇಕರ್ ಅಳವಡಿಸುವಂತೆ ನಗರಸಭೆ ಸದಸ್ಯ ಗಫಾರ್ ಪೇಶಮಾಮ್ ಸಲಹೆ ನೀಡಿದರು. ಯಾವುದೇ ಯೋಜನೆ ರೂಪಿಸುವಾಗ ಹಳೆಯ ಬದಲು ಹೊಸ ಕ್ರಮದೊಂದಿಗೆ ನಗರ ಸುಂದರೀಕರಣಕ್ಕೆ ಒತ್ತು ನೀಡಬೇಕು ಎಂದು ಗ್ಯಾರಂಟಿ ಸಮಿತಿಯ ಖುತಬೋದ್ದಿನ್ ಹೇಳಿದರು.
ಪತ್ರಿಕಾ ಭವನ ನಿರ್ಮಾಣಕ್ಕೆ ನಿವೇಶನ ಕಲ್ಪಿಸುವಂತೆ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷರು ಗಮನಕ್ಕೆ ತಂದರು.
ಪ್ರಮುಖರಾದ ಬಂಡೆಪ್ಪ ಮೇತ್ರೆ, ಕಲ್ಯಾಣರಾವ ಶಿವಣಕರ್, ಸಗಿರೋದ್ದಿನ್, ಮಲ್ಲಿಕಾರ್ಜುನ ಬೊಕ್ಕೆ, ಪವನ್ ಗಾಯಕವಾಡ, ಮೊಯಿಯೋದ್ದಿನ್, ಜಾಹೀದಾಬಾನು, ನಾಹಿದಾ ಸುಲ್ತಾನಾ, ನಗರಸಭೆ ಎಇಇಗಳಾದ ರಿಯಾಜ್, ಮನೋಜಕುಮಾರ ಕಾಂಬಳೆ, ಸಿಎಒ ಶಿವಕುಮಾರ, ಪಿಎಸ್‌ಐ ಸಿದ್ದೇಶ್ವರ ಇತರರಿದ್ದರು.
ಒಂದೇ ಕಡೆಗಿರುವ ತರಕಾರಿ ಹಾಗೂ ಚಿಕನ್ ಮಾರುಕಟ್ಟೆ ವಿಂಗಡಿಸಿ ಪ್ರತ್ಯೇಕ ಸ್ಥಳ ಕಲ್ಪಿಸಬೇಕು. ಹೊಸ ಮನೆ ನಿರ್ಮಾಣಕ್ಕೆ ಅನುಮತಿ ನೀಡುವಾಗಲೇ ಸುಂದರೀಕರಣ ಕುರಿತ ನಿಯಮ ರೂಪಿಸಬೇಕು.
| ನಿರ್ಮಲಾ ಶಿವಣಕರ್ ನಗರಸಭೆ ಸದಸ್ಯೆ