

ನೆಲಮಂಗಲ: ತಾಲೂಕಿನ ಬಾಣಸವಾಡಿ ಗ್ರಾಮವನ್ನು ಸೀಲ್‌ಡೌನ್ ಮಾಡಿದ್ದು ಗ್ರಾಮಸ್ಥರಿಗೆ ಮೂಲಸೌಕರ್ಯಗಳ ಕೊರತೆ ಎದುರಾಗಿದೆ. ಕಳೆದ ಕೆಲ ದಿನಗಳ ಹಿಂದೆ ತಾಲೂಕಿನ ಸೋಲದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ಬಾಣಸವಾಡಿಯಲ್ಲಿದ್ದ 18 ವರ್ಷದ ಯುವಕನಿಗೆ ಕರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಯುವಕನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಮನೆಯ 6 ಮಂದಿಯನ್ನು ಕ್ವಾರಂಟೈನ್ ಮಾಡಿ, ಗ್ರಾಮದ ಜನರು ಹೊರಹೋಗದಂತೆ ಸೀಲ್‌ಡೌನ್ ಮಾಡಿರುವುದರಿಂದ ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದು, ಸೋಲದೇವನಹಳ್ಳಿ ಗ್ರಾಪಂ ಹಾಗೂ ತಾಲೂಕು ಆಡಳಿತ ಮೂಲ ಸೌಕರ್ಯ ಕಲ್ಪಿಸಬೇಕಿದೆ. ಸೀಲ್‌ಡೌನ್ ಮಾಡಿರುವುದರಿಂದ ಮೂಲ ಸೌಕರ್ಯ, ಆಹಾರ ಸಾಮಗ್ರಿಗಳಿಲ್ಲದೆ ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅಗತ್ಯ ವಸ್ತುಗಳ ಪೂರೈಕೆ ಮಾಡಬೇಕು. ಕ್ಯಾರಂಟೈನ್ ಮಾಡಿದ 6 ಜನರಲ್ಲಿ ಸೋಂಕು ಪತ್ತೆಯಾಗದಿರುವುದರಿಂದ ಗ್ರಾಮವನ್ನು ಸೀಲ್‌ಡೌನ್‌ನಿಂದ ಮುಕ್ತ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು. ಗ್ರಾಮದಲ್ಲಿ 70ಕ್ಕೂ ಹೆಚ್ಚು ಕುಟುಂಬ ಹೈನುಗಾರಿಕೆ ನಂಬಿ ಬದುಕು ಕಟ್ಟಿಕೊಂಡಿದೆ. ಬೆಳಗ್ಗೆ, ಸಂಜೆ ಸೇರಿ 900 ಲೀಟರ್‌ಗೂ ಅಧಿಕ ಹಾಲು ಸಂಗ್ರಹವಾಗುತ್ತದೆ. ಆದರೆ ಗ್ರಾಮದಲ್ಲಿದ್ದ ಯುವಕನಿಗೆ ಕರೊನಾ ವೈರಸ್ ಸೋಂಕು ಪತ್ತೆಯಾದ ಹಿನ್ನಲೆಯಿಂದ ಡೇರಿ ಹಾಲನ್ನು ತೆಗೆದುಕೊಳ್ಳುತ್ತಿಲ್ಲ. ಇದರಿಂದ ರೈತರು ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ನೂರಾರು ಜಾನುವಾರುಗಳು ಮೇವಿಲ್ಲದೇ ನಲುಗುತ್ತಿವೆ. ಆದ್ದರಿಂದ ಗ್ರಾಮವನ್ನು ಸೀಲ್‌ಡೌನ್‌ನಿಂದ ಮುಕ್ತ ಮಾಡಬೇಕು. ಎಂದು ಗ್ರಾಪಂ ಸದಸ್ಯೆ ಬಿ.ಎನ್.ಸುನಂದಮ್ಮ ಒತ್ತಾಯಿಸಿದ್ದಾರೆ.
ಕರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ. ಇದರಿಂದ ಬಮುಲ್‌ನಿಂದ ಹಾಲು ಸಂಗ್ರಹ ಮಾಡುವುದಿಲ್ಲ. ತಾತ್ಕಾಲಿಕವಾಗಿ ಡೇರಿ ಮುಚ್ಚಲಾಗಿದೆ. ನಾಗರಾಜು, ಡೇರಿ ಕಾರ್ಯದರ್ಶಿ, ಬಾಣಸವಾಡಿ