ಮೂಲಸೌಕರ್ಯ ಕಲ್ಪಿಸದಿದ್ದರೆ ದೇಗುಲಕ್ಕೆ ಬೀಗ

honnikeri
Published on

ಬೀದರ್: ತಾಲ್ಲೂಕಿನ ಹೊನ್ನಿಕೇರಿ ಗ್ರಾಮದ ಐತಿಹಾಸಿಕ ಸಿದ್ಧೇಶ್ವರ ದೇಗುಲಕ್ಕೆ ಶೀಘ್ರ ಮೂಲಸೌಕರ್ಯ ಕಲ್ಪಿಸದಿದ್ದರೆ ಆಗಸ್ಟ್ 16 ರಂದು ದೇಗುಲಕ್ಕೆ ಬೀಗ ಹಾಕಿ, ಧರಣಿ ಹಾಗೂ ರಸ್ತೆ ತಡೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯ ವೈಜಿನಾಥ ದತ್ತಾತ್ರಿ ಖೇಳಬಾ, ಗ್ರಾಮದ ಪ್ರಮುಖರಾದ ಮಚ್ಚೇಂದ್ರ ಬನ್ನಿ, ಶ್ರೀಮಂತ ಖೇಳಬಾ, ಮಾರುತಿ ಮೇತ್ರೆ, ವೆಂಕಟ ಕೊನ್ನೆ, ಪರಶುರಾಮ ಮೇತ್ರೆ, ನಾರಾಯಣ ಜಾಧವ್, ದೇವದಾಸ ರೆಡ್ಡಿ, ರಾಜು ಚಿಂಚೋಳೆ, ಗುಣವಂತರಾವ್, ನರಸಿಂಗರಾವ್ ಚಿಂಚೋಳಿ ಮತ್ತಿತರರು ಈ ಕುರಿತು ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಮಂದಿರಕ್ಕೆ ಸಂಬಂಧಿಸಿದ ಬ್ಯಾಂಕ್ ಖಾತೆಯಲ್ಲಿ ರೂ. 2 ಕೋಟಿ ಇದೆ. ಆದರೂ, ಮೂಲಸೌಕರ್ಯ ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಳೆಯ ದೇಗುಲ ಕಟ್ಟಡ ಮಳೆ ಬಿದ್ದಾಗ ಸೋರುತ್ತಿದ್ದು, ಕುಸಿಯುವ ಆತಂಕ ಇದೆ.
ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ನೈವೇದ್ಯ ಸಿದ್ಧಪಡಿಸಿಕೊಳ್ಳಲು ಕೋಣೆಗಳಿಲ್ಲ. ಕುಡಿಯುವ ನೀರಿನ ಸರಿಯಾದ ವ್ಯವಸ್ಥೆ ಇಲ್ಲ ಎಂದು ಹೇಳಿದ್ದಾರೆ.
ಶೌಚಾಲಯ ನಿರ್ಮಿಸಿ ಎರಡು ವರ್ಷವಾದರೂ ಬಳಕೆಗೆ ಮುಕ್ತಗೊಳಿಸಿಲ್ಲ. ಹೀಗಾಗಿ ಭಕ್ತಾದಿಗಳಿಗೆ ತೊಂದರೆಯಾಗುತ್ತಿದೆ. ವ್ಯವಸ್ಥಾಪಕರಿಲ್ಲದ ಕಾರಣ ವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ.
ದೇಗುಲಕ್ಕೆ ಆದಷ್ಟು ಬೇಗ ಮೂಲಸೌಕರ್ಯ ಕಲ್ಪಿಸಬೇಕು. ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು. ವ್ಯವಸ್ಥಾಪಕರ ನೇಮಕ ಮಾಡಬೇಕು. ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಶಿವಕಾಂತ ಸಂಗಯ್ಯ ಸ್ವಾಮಿ ಅವರನ್ನೇ ಪೂಜಾರಿ ಹುದ್ದೆಯಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net